ರಾಮನಗರ:ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲೆಯ ಜಿಗೇನಹಳ್ಳಿ ಬಳಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಈ ಹೆಲಿಪ್ಯಾಡ್ನಿಂದ ಬಸವನಪುರವರೆಗೂ ಗಡ್ಕರಿ ಅವರೇ ಕಾರ್ ಡ್ರೈವ್ ಮಾಡಿಕೊಂಡು ರಸ್ತೆಯ ಸ್ಥಿತಿಗತಿ ಪರೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಮೀಕ್ಷೆಯ ಬಳಿಕ ಸಚಿವರು ಮಾಧ್ಯಮಗಳೊಂದಿಗೆ ಸಂವಾದ ನಡೆಸುವರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವೀಕ್ಷಣೆಗೆ ನಿತಿನ್ ಗಡ್ಕರಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ಕಳೆದ ಬಾರಿ ಮಳೆ ಬಂದು ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಅವೈಜ್ಞಾನಿಕ ಕಾಮಗಾರಿ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.
ಮಾರ್ಚ್ ಅಂತ್ಯದೊಳಗೆ ಹೆದ್ದಾರಿ ಉದ್ಘಾಟನೆ:ಮಾರ್ಚ್ ಅಂತ್ಯದ ವೇಳೆಗೆ ಹೆದ್ದಾರಿ ಉದ್ಘಾಟನೆ ಸಾಧ್ಯತೆ ಇದೆ. ಈ ಮುಖೇನ ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ಗಂಟೆ ಪ್ರಯಾಣ ಮಾಡಬಹುದು. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗಡ್ಕರಿ ನಡೆಸಲಿರುವ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.