ರಾಮನಗರ :ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಘೋಷಣೆಯಾಗಿ ಎರಡು ವರ್ಷಗಳು ಕಳೆದರೂ ಈವರೆಗೂ ಕಾರ್ಯಗತವಾಗಿಲ್ಲ. ಇದರಿಂದ ಬಿಡದಿ ಹಾಗೂ ಹಾರೋಹಳ್ಳಿ ಭಾಗದ ಅನೇಕರಿಗೆ ಉದ್ಯೋಗ ಕಲ್ಪಿಸುವ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ)(1)ಅನ್ವಯ ಬಿಡದಿ ಹಾಗೂ ಸುತ್ತಲಿನ 38 ಗ್ರಾಮಗಳನ್ನು ಈ ಯೋಜನೆಗೆ ಒಳಪಡಿಸಲಾಗಿದೆ. ಬಿಡದಿ ಹಾಗೂ ಹಾರೋಹಳ್ಳಿ ನಡುವೆ ಕೈಗಾರಿಕಾ ಕಾರಿಡಾರ್ ಯೋಜನೆ, ಇನ್ನಿತರ ಬೇಡಿಕೆಗಳು ಈವರೆಗೂ ಈಡೇರದ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳ ಬೇಸರಕ್ಕೆ ಕಾರಣವಾಗಿದೆ.
ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ ಮುಗಿಯೋದ್ಯಾವಾಗ? ದಿನೇದಿನೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರವನ್ನು ವಿಸ್ತರಿಸಲು ಹಾಗೂ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು 2016ರ ಅಕ್ಟೋಬರ್ 21ರಂದು ಸ್ಮಾರ್ಟ್‌ಸಿಟಿ ಬಗ್ಗೆ ರಾಜ್ಯ ಸರ್ಕಾರ ಪತ್ರ ಹೊರಡಿಸಿತ್ತು. ಆಂಧ್ರ ವಿಭಜನೆ ನಂತರ ಅಲ್ಲಿ ನಿರ್ಮಿಸಲಾದ ಯೋಜಿತ ನಗರ ಅಮರಾವತಿ ಮಾದರಿ ಬಿಡದಿಯಲ್ಲಿಯೂ ಹೊಸ ಯೋಜಿತ ನಗರ (ಸ್ಮಾರ್ಟ್ ಸಿಟಿ) ನಿರ್ಮಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಎರಡೂವರೆ ವರ್ಷದ ಹಿಂದೆಯೇ ಭರವಸೆ ನೀಡಿದ್ದರು. ಅದು ಈವರೆಗೂ ಈಡೇರಿಲ್ಲ. ಯಾವುದೇ ಕಾಮಗಾರಿಗಳೂ ಪ್ರಾರಂಭಗೊಂಡಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಗೊಳಪಟ್ಟ ಪ್ರದೇಶಗಳಲ್ಲಿನ ಅಭಿವೃದ್ಧಿಗಳ ನಿಯಂತ್ರಣ ಹಾಗೂ ಮಹಾಯೋಜನೆ ತಯಾರಿಸುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಗ್ರೇಟರ್ ಬೆಂಗಳೂರು-ಬಿಡದಿ ಸ್ಪಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಈವರೆಗೂ ಸಭೆ ನಡೆಸುವುದಕ್ಕೆ ಮಾತ್ರವೇ ಸೀಮಿತಗೊಂಡಿದೆ. ಪ್ರಾಧಿಕಾರಕ್ಕೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅಧ್ಯಕ್ಷರಾಗಿ, ರಾಮನಗರದ ಜಿಲ್ಲಾಧಿಕಾರಿ ಸದಸ್ಯರಾಗಿ ನೇಮಿಸಿಕೊಂಡಿದೆ.
ಆದರೆ, ಎರಡೂವರೆ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಈ ಮೊದಲಿದ್ದ ಜಿಲ್ಲಾಧಿಕಾರಿ ಒಂದು ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಈ ಯೋಜನೆ ಬಗ್ಗೆ ಜಿಲ್ಲಾಡಳಿತದಲ್ಲಿಯೇ ಮಾಹಿತಿ ಕೊರತೆ ಕಾಡತೊಡಗಿದೆ. ಬಿಡದಿ ಅರಳಾಳುಸಂದ, ಬೈರಮಂಗಲ, ಗಾಣಕಲ್ಲು, ಬನ್ನಿಕೆರೆ ಸೇರಿ ಒಟ್ಟು 26 ಗ್ರಾಮಗಳು ರಾಮನಗರ ತಾಲೂಕು ವ್ಯಾಪ್ತಿಯಲ್ಲಿ 11 ಹಾಗೂ ಹಾರೋಹಳ್ಳಿ ಸಮೀಪದ ವಡೇರಹಳ್ಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ನಡೆದಿಲ್ಲ. ಯೋಜನೆಗೆ ವಿಶೇಷವಾಗಿ ಪೂರ್ಣ ಕಂದಾಯ ಗ್ರಾಮಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಬಿಡದಿ ಸಂಪೂರ್ಣವಾಗಿ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಸೇರ್ಪಡೆಯಾಗುತ್ತೆ. ಮುಖ್ಯವಾಗಿ ಬೆಟ್ಟಗುಡ್ಡಗಳಿಂದ ಆವೃತ್ತಗೊಂಡಿರುವ ರಾಮನಗರವು ಸಾಕಷ್ಟು ಅಭಿವೃದ್ಧಿಯಾಗಲಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಗೊಂಡಿದ್ದ ಸ್ಪಾರ್ಟ್ ಸಿಟಿ ಯೋಜನೆ ಸಮ್ಮಿಶ್ರ ಸರಕಾರದಲ್ಲಿ ಮುಂದುವರಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ರಾಮನಗರದಲ್ಲಿಯೇ ತಮ್ಮ ರಾಜಕೀಯ ಭವಿಷ್ಯ ಕಂಡಿರುವ ಹೆಚ್ ಡಿ ಕುಮಾರಸ್ವಾಮಿ ಇದೀಗ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈ ಯೋಜನೆ ಬಗ್ಗೆ ಯಾವೊಂದು ಸಭೆಗಳನ್ನು ನಡೆಸಿಲ್ಲ. 12 ವರ್ಷಗಳ ಹಿಂದೆ ಜಿಲ್ಲೆಗೆ ಘೋಷಣೆ ಮಾಡಿದ್ದ ಉಪನಗರಿ ಯೋಜನೆಯೇ ಹಳ್ಳ ಹಿಡಿದಿರುವಾಗ ಸುಮಾರು 3 ವರ್ಷಗಳ ಹಿಂದೆ ಘೋಷಣೆಯಾಗಿರುವ ಸ್ಪಾರ್ಟ್ ಸಿಟಿ ಯೋಜನೆ ಈಡೇರುವುದು ಯಾವ ಕಾಲಕ್ಕೆ ಎಂಬ ಬೇಸರದ ನುಡಿ ನಿರುದ್ಯೋಗಿಗಳದ್ದಾಗಿದೆ. ಕಳೆದ ಬಜೆಟ್‌ನಲ್ಲಿಯೂ ಸಹ ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ಸರ್ಕಾರ ಮಾತನಾಡಿಲ್ಲದಿರುವುದು ವಿರ್ಪಯಾಸ.