ಚನ್ನಪಟ್ಟಣ:ಇಷ್ಟು ದಿನ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲಿದ್ದವು. ಈಗ ಅನುಷ್ಠಾನವಾಗಿ ಕಣ್ಣಿಗೆ ಕಾಣುತ್ತಿವೆ. ಇದಕ್ಕೆ ಕಾರಣ ದೇಶ ಮತ್ತು ರಾಜ್ಯದಲ್ಲಿ ಆಗಿರುವ ರಾಜಕೀಯ ಬದಲಾವಣೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಮನಗರವೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಚನ್ನಪಟ್ಟಣ ತಾಲೂಕಿನ ಜೆ.ಬ್ಯಾಡರಹಳ್ಳಿಯ ಶಾಲೆ ಮೈದಾನದಲ್ಲಿ ಮಂಗಳವಾರದಂದು ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ನಡೆದ ಅಬ್ಬರದ ರಾಜಕೀಯ ಸಾಕು, ಕೌಟುಂಬಿಕ ರಾಜಕಾರಣ ಸಾಕು. ಅಭಿವೃದ್ಧಿಯನ್ನು ಮರೆತು ಸ್ವಾರ್ಥ ರಾಜಕಾರಣ ಮಾಡಿದ ಪಕ್ಷಗಳು ಸಾಕು.
ದೇಶ, ರಾಜ್ಯದಲ್ಲಿ ಈಗ ಎಲ್ಲವೂ ಬದಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲೂ ಬದಲಾವಣೆ ಬರಬೇಕು. ಈ ಚುನಾವಣೆಯಲ್ಲಿ ಶೇ.80ರಷ್ಟು ಅಭ್ಯರ್ಥಿಗಳು ಬಿಜೆಪಿಯಿಂದಲೇ ಗೆಲ್ಲಬೇಕು. ಆ ಮೂಲಕ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಸಹಿಸಲ್ಲ :ಡಿಸಿಎಂ ಭಾಷಣದ ನಡುವೆಯೇ ಮಧ್ಯ ಪ್ರವೇಶಿಸಿದ ಪಕ್ಷದ ಕಾರ್ಯಕರ್ತರು, ಕನಕಪುರ ಹಾಗೂ ಜಿಲ್ಲೆಯ ಅನೇಕ ಕಡೆ ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರ ಬೆಂಬಲಿಗರಿಂದ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿದರು.