ರಾಮನಗರ:ಜಿಲ್ಲೆಯಲ್ಲಿ ಲಾಕ್ಡೌನ್ ಸಮಯದಲ್ಲಿ ಸರಗಳ್ಳನ ಪ್ರಕರಣಗಳು ಹೆಚ್ಚಾಗುತ್ತಿತ್ತು. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಜಿಲ್ಲೆಯ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಹಲವು ಪ್ರಕರಣಗಳಲ್ಲಿ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಸರಗಳನ್ನ ನನ್ನ ಬಂಧಿಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗದು ಸೇರಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಕಗ್ಗಲೀಪುರ, ಸಾತನೂರು, ಐಜೂರು ಹಾಗೂ ಕುದೂರು ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಚಿನ್ನಾಭರಣಗಳನ್ನ ದೋಚಿ ಐಷಾರಾಮಿ ಬದುಕು:
ಅದರಲ್ಲೂ ಪ್ರಮುಖವಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಸರಗಳ್ಳನನ್ನ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಮೂಲದ ಸಂತೋಷ್ ಬಂಧಿತ ಆರೋಪಿ. ಒಬ್ಬೊಂಟಿಯಾಗಿದ್ದುಕೊಂಡು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳ ನುಗ್ಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನ ದೋಚಿ ಅದನ್ನು ಮಾರಾಟ ಮಾಡಿದ ಈತ ಆ ಹಣದಲ್ಲಿ ಐಷಾರಾಮಿ ಬದುಕು ಕಟ್ಟಿಕೊಂಡಿದ್ದ. ಕೋಲಾರ, ಮಂಡ್ಯ, ಹಾಸನ, ದಾವಣಗೆರೆ, ಹಾರೋಹಳ್ಳಿ ಹಾಗೂ ಕಗ್ಗಲೀಪುರ ಪೊಲೀಸ್ ಠಾಣೆಗಳಲ್ಲಿ ಸುಮಾರು 14ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು 40 ಲಕ್ಷ ರೂ. ಮೌಲ್ಯದ 802 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ. ಏಳು ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಆತನ ಬೆನ್ನು ಬಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಮಾಡಿರುವ ಕೆಲಸಕ್ಕೆ ರಾಮನಗರ ಎಸ್ಪಿ ಗಿರೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.