ರಾಮನಗರ: ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊಟ್ಟ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಅವರು ಭಾಷಣ ಮಾಡಿದರು. ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಹೊಸ ನೀತಿಯು ಮತ್ತಷ್ಟು ಬಲ ತುಂಬಲಿದೆ. ಹೀಗಾಗಿ ಈ ನೀತಿಯನ್ನು ಮೊಟ್ಟ ಮೊದಲು ಅಂಗೀಕರಿಸಿದ ರಾಜ್ಯ ಕರ್ನಾಟಕವೇ ಆಗಲಿದೆ ಎಂದು ಹೇಳಿದರು.
ಹೊಸ ನೀತಿಯ ಕರಡು ಪ್ರತಿ ಸಿಕ್ಕ ಕೂಡಲೇ ಸರ್ಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು. ಕೇಂದ್ರ ನೀತಿಯನ್ನು ಪ್ರಕಟಿಸಿದ ಮೇಲೆ ಕಾರ್ಯಪಡೆ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ನೀತಿಯ ಜಾರಿ ಬಗ್ಗೆ ಆದಷ್ಟು ಬೇಗ ಈ ಕಾರ್ಯಪಡೆ ವರದಿ ನೀಡಲಿದೆ ಎಂದು ನುಡಿದರು.
ಉನ್ನತ ಶಿಕ್ಷಣದಲ್ಲಿ ಸುಧಾರಣೆ ಪರ್ವ:
ನಮ್ಮ ರಾಜ್ಯವನ್ನು ಕಟ್ಟುವುದರಲ್ಲಿ ಉನ್ನತ ಶಿಕ್ಷಣದ ಪಾತ್ರ ಸಾಕಷ್ಟಿದೆ. ಈ ಕಾರಣಕ್ಕಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಸರ್ಕಾರ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಗಣಕೀಕರಣವಾಗಿದೆ. ’ಇ-ಆಫೀಸ್’ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೂಲಕ ಎಲ್ಲಾ ವ್ಯವಹಾರಗಳು ನಡೆಯುತ್ತಿವೆ. ಜೊತೆಗೆ, ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ ಸ್ವಾಯತ್ತತೆ ನೀಡಲು ಡಾ. ಎಸ್. ಸಡಗೋಪನ್ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಆ ವರದಿಯನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಹೇಳಿದರು.