ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಅರ್ಬನ್ ರೈಲ್ವೆ ಯೋಜನೆಯ ಕುರಿತಾಗಿ ಮಾತನಾಡಿದ್ದಾರೆ. ಇದು ನಾನು 2018ರಲ್ಲೇ ಸಿಎಂ ಆಗಿದ್ದಾಗ ಮಾಡಿರುವಂತೆ ಯೋಜನೆಯಾಗಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಜೊತೆಗೆ ಅಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ರನ್ನು ಭೇಟಿ ಮಾಡಿದ್ದೆ ಎಂದು ಕನಕಪುರದ ಮರಳವಾಡಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆ ಬಗ್ಗೆ ನಮ್ಮ ಪಕ್ಷ ಆಡಳಿತದಲ್ಲಿದ್ದ ಸಮಯದಲ್ಲಿ 19 ಷರತ್ತುಗಳನ್ನ ರಾಜ್ಯ ಸರ್ಕಾರದಿಂದ ವಿಧಿಸಿದ್ದೆವು. ಕೃಷ್ಣ ಕಚೇರಿಗೆ ಅವರೇ ಬಂದಿದ್ದು 2019 ರಲ್ಲೇ ಪ್ರಧಾನಿಗಳು ಬಂದು 23 ಸಾವಿರ ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಬೇಕಿತ್ತು. ಇಷ್ಟೊತ್ತಿಗೆ ಈ ಯೋಜನೆ ಮುಗುದಿರಬೇಕಿತ್ತು. ಆದರೇ 2022ಕ್ಕೆ ಬಂದಿದ್ದಾರೆ ಎಂದು ಪ್ರಧಾನಿ ಮೋದಿಯವರ ಬೆಂಗಳೂರು ಹಾಗೂ ಮೈಸೂರು ಪ್ರವಾಸದ ಭೇಟಿಯ ಕುರಿತಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚುನಾವಣೆ ಹತ್ತಿರ ಬರ್ತಿದ್ದಂಗೆ ಮೋದಿಗೆ ಕರ್ನಾಟಕ ನೆನಪಾಗಿದೆ: ಹೆಚ್.ಡಿ. ಕುಮಾರಸ್ವಾಮಿ ನಾನು ತೆಗೆದುಕೊಂಡ ನಿರ್ಧಾರಗಳು ಸರ್ಕಾರದ ಕಡತದಲ್ಲಿವೆ. ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಗೆ 8 ಸಭೆಗಳನ್ನ ಮಾಡಿದ್ದೇನೆ. ಇದೆಲ್ಲವೂ ಸಹ ನಾನು ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಮಾಡಿದ ಯೋಜನೆಯಾಗಿದೆ. ಅರ್ಧ ಕೆಲಸ ನಾನು ಸಿಎಂ ಆಗಿದ್ದಾಗಲೇ ಮಾಡಿದ್ದೆ. ಈಗ ಚುನಾವಣೆ ಹತ್ತಿರವಾಗ್ತಿದ್ದಂತೆ ಪ್ರಧಾನಿಗೆ ಕರ್ನಾಟಕ ನೆನಪಿಗೆ ಬಂದಿದೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪರೋಕ್ಷವಾಗಿ ಟೀಕಿಸಿದರು.
ಮೋದಿ ಸನ್ಯಾಸರಲ್ಲ, ಅಧಿಕಾರಕ್ಕಾಗಿ ಪಕ್ಷ ಇದೆ, ಹಾಗಾಗಿ ರಾಜ್ಯಕ್ಕೆ ಬಂದಿದ್ದಾರೆ. ಅಲ್ಲದೇ ಕೆಲವು ಯೋಜನೆಗಳಿಗೆ ಹಣ ಕಡಿತ ಮಾಡಿದ್ದಾರೆ. ಸಬ್ ಅರ್ಬನ್ಯೋಜನೆ ದೇವೇಗೌಡರು ಸಿಎಂ - ಪಿಎಂ ಆಗಿದ್ದಾಗ 1995 ರಲ್ಲೇ ತಂದಿದ್ದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ:ಅಗ್ನಿಪಥ್ ಯೋಜನೆ ಹಿಂಪಡೆವ ಮಾತೇ ಇಲ್ಲ, ಇದು ದಶಕಗಳ ಚಿಂತನೆಯ ಫಲ: ಅಜಿತ್ ದೋವಲ್