ರಾಮನಗರ :ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ಮಾಡುತ್ತಿದೆ. ಈ ಹಿಂದೆ ಅವರೇ ಸರ್ಕಾರದಲ್ಲಿ ಇದ್ದರೂ ಈ ಯೋಜನೆ ಆರಂಭಿಸಿಲ್ಲ. ಈಗ ಕಾನೂನು ತೊಡಕು ಮುಗಿಸಿ, ತಾಂತ್ರಿಕ ಸಮಸ್ಯೆಗಳನ್ನ ಮುಗಿಸಿ ಒಂದು ಹಂತಕ್ಕೆ ಬಂದಿದೆ. ಇದನ್ನ ತಿಳಿದುಕೊಂಡು ಬಿಜೆಪಿಗೆ ಹೆಸರು ಬರಬಾರದು ಎಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಕನಕಪುರ ತಾಲೂಕಿನವರಾಗಿರೋದರಿಂದ ಅವರ ಕರ್ತವ್ಯ ಮಾಡುತ್ತಿದ್ದಾರೆ. ಈ ಯೋಜನೆ ಆರಂಭಿಸುತ್ತೇವೆ ಎಂದು ಈಗಾಗಲೇ ಸಿಎಂ ಅವರು ಹೇಳಿದ್ದಾರೆ. ಹೀಗಾಗಿ, ಈ ಯೋಜನೆ ಜಾರಿ ಮಾಡುತ್ತೇವೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನ ಸರ್ಕಾರ ಮಾಡುತ್ತದೆ ಎಂದರು.
ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ..
ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಏನೋ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಆದಾಗಿನಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಯೋಜನೆ ಮಾಡಬೇಕಾಗಿದ್ದು, ಕಾನೂನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದೀಗ ಕಾಂಗ್ರೆಸ್‌ನವರಿಗೆ ಜ್ಞಾನೋದಯ ಆಗಿದೆ ಎಂದು ಸಚಿವರು ಕಿಡಿ ಕಾರಿದರು.