ರಾಮನಗರ: ಕಪಾಲಬೆಟ್ಟದ ವಿಚಾರ ಇವತ್ತಿನದಲ್ಲ. ಆ ಹಳ್ಳಿಯಲ್ಲಿ ಕ್ರೈಸ್ತ ಸಮುದಾಯದವರು 80 ಭಾಗ ಇದ್ದಾರೆ, ನಾನು ನೋಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಪಾಲಬೆಟ್ಟದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗದಿರುವ ಬಗ್ಗೆ ಆಕ್ರೋಶ ಕನಕಪುರದ ಹಾರೋಬಲೆ ಕಪಾಲಬೆಟ್ಟದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಪಾಲಬೆಟ್ಟದಲ್ಲಿ ಕಾನೂನು ಬಾಹಿರವಾಗಿ ಚಟುವಟಿಕೆ ನಡೆಯುತ್ತಿದ್ದರೆ ಸರ್ಕಾರ ಕ್ರಮವಹಿಸಲಿ. ಇವರ ಕೈಯಲ್ಲಿ ಸರ್ಕಾರ ಇದೆ. ಆದರೆ, ಬೀದಿಯಲ್ಲಿ ಪ್ರತಿಭಟನೆ ಯಾಕೆ ಮಾಡ್ಬೇಕು. ಅಲ್ಲಿನ ವರದಿ ತೆಗೆದುಕೊಳ್ಳಲು ಎಷ್ಟು ದಿನ ಬೇಕು, ಸರ್ಕಾರದ ರೆಕಾರ್ಡ್ಸ್ ಇಲ್ವಾ?, ನನ್ನನ್ನೇ ಕೇಳಿ ನಾನೇ ಕೊಡ್ತೀನಿ, ನಾನು ಇಟ್ಟುಕೊಂಡಿದ್ದೇನೆ ಬೇಕು ಅಂದ್ರೆ ಸದನದಲ್ಲಿಯೇ ಕೊಡ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಶಾಸಕ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವ ವಿಚಾರದಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ ಹೆಚ್ಡಿಕೆ, ಆ ರೀತಿ ಚರ್ಚೆ ಮಾಡಿದ್ರೆ 20 ಜನರ ಬಗ್ಗೆ ಚರ್ಚೆ ಮಾಡ್ತೀನಿ, 20 ಜನರ ಮೇಲೆ ಆ ರೀತಿಯ ಕೇಸ್ಗಳಿವೆ. ಯಾರ್ಯಾರು ಏನೇನು ಲೂಟಿ ಮಾಡಿದ್ದಾರೆ, ಕಾನೂನುಬಾಹಿರ ಚಟುವಟಿಕೆ ನಡೆಸಿದ್ದಾರೆ ಅಂತಾ ಚರ್ಚೆ ಮಾಡ್ತೇನೆ. ಆದರೆ, ಅದರಿಂದ ಪ್ರಯೋಜನವಿಲ್ಲ, ವ್ಯವಸ್ಥೆಯೇ ಹಾಗಾಗಿದೆ ಎಂದರು.
ಇದೇ ವೇಳೆ ಸಚಿವ ಆರ್.ಅಶೋಕ್ ಮಗನ ಆಕ್ಸಿಡೆಂಟ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಪಘಾತದ ಬಗ್ಗೆ ಸರ್ಕಾರ ಕಾನೂನು ಮೂಲಕ ಕ್ರಮ ಕೈಗೊಳ್ಳಲಿ, ವಾಸ್ತವದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಬರಬಹುದು, ಅಲ್ಲಿ ಚರ್ಚೆ ಮಾಡ್ತೇನೆ ಎಂದು ಹೇಳಿದರು.