ರಾಮನಗರ:ಸೋಲು ಗೆಲುವಿನ ಬಗ್ಗೆ ಎಂದೂ ನಮ್ಮ ಕುಟುಂಬ ತಲೆಕೆಡಿಸಿಕೊಂಡಿಲ್ಲ. ಸದಾ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿರುವ ಹಿನ್ನೆಲೆ ಇರುವ ಕುಟುಂಬ ನಮ್ಮದು, ಜನ ಸೋಲಿಸಿ ವಿಶ್ರಾಂತಿ ಪಡೆಯಿರಿ ಎಂದಾಗಲೂ ಜನರ ಸಮಸ್ಯೆ ಹಿಡಿದು ಹೋರಾಟ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಅವರು ಬೆಂಗಳೂರು-ಮೈಸೂರು ನ್ಯಾಷನಲ್ ಹೈವೇ ವಿಚಾರದಲ್ಲಿ ತಿಟ್ಟಮಾರನಹಳ್ಳಿ ಬಳಿ ಉಂಟಾಗಿದ್ದ ಸಮಸ್ಯೆ ಬಗ್ಗೆ ಸ್ಥಳೀಯರೊಂದಿಗೆ ಸ್ಥಳ ವೀಕ್ಷಣೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜನರ ಬೇಡಿಕೆ ಬಗ್ಗೆ ಖುದ್ದು ಗಡ್ಕರಿ ಅವರ ಬಳಿ ಮಾತನಾಡಿ ಪರಿಹಾರ ಕೊಡಿಸುತ್ತೇನೆ, ಭಯಪಡಬೇಡಿ ಎಂದರು.
ಚನ್ನಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಈ ವೇಳೆ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಪ್ರವೇಶ ದೇವರ ಇಚ್ಛೆ, ಅವರು ಈ ಹಿಂದೆಯೇ ಲೋಕಸಭೆಯಲ್ಲಿ ವಿದಾಯ ಹೇಳಿ ಇದೇ ನನ್ನ ಕೊನೆಯ ಭಾಷಣ ಎಂದಿದ್ದರು. ಆದರೆ ಜನರ ಒತ್ತಾಯಕ್ಕೆ ಮಣಿದು ತುಮಕೂರಿನಲ್ಲಿ ಸ್ಪರ್ಧೆ ಮಾಡಬೇಕಾಯಿತು. ಅಲ್ಲಿಯ ಜನರು ಚುನಾವಣೆಯಲ್ಲಿ ಸೋಲಿಸಿದರು. ಈಗ ಅವರ ಅನುಭವದ ದೃಷ್ಟಿಯಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿಯ ಮುಂದೆ ತಿಳಿಸಲು ಗಟ್ಟಿ ಧ್ವನಿ ಬೇಕಿದೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಸೋಲು ಗೆಲುವನ್ನ ಸಮಾನವಾಗಿ ಕಂಡಿದ್ದೇವೆ, ನಾವು ಯಾವತ್ತೂ ಗೆದ್ದೆ ಎಂದು ತಲೆತಿರುಗಿಲ್ಲ, ಸೋತೆವು ಎಂದು ಕುಗ್ಗಿಲ್ಲ. ಜನರ ಸೇವೆಗಾಗಿ ಇರುವ ಕುಟುಂಬ ನಮ್ಮದು ಎಂದು ಹೇಳಿದರು.
ತಿಟ್ಟಮಾರನಹಳ್ಳಿಗೆ ಕುಮಾರಸ್ವಾಮಿ ಭೇಟಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಹೆಚ್ಡಿಕೆ:
ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ನಡುವೆ ಮತ್ತೆ ಮೈತ್ರಿ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ತುಮಕೂರಿನಲ್ಲಿ ಸೋತಿದ್ದ ದೇವೇಗೌಡರು ರಾಜ್ಯ ಸಭೆಗೆ ಹೋಗಿಲ್ವೇ? ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಬಗ್ಗೆ ಅಶೋಕ್ ಹೇಳಿಕೆ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.