ರಾಮನಗರ:ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ.ಶಿವಕುಮಾರ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಈ ಮೂಲಕ ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ರಿಲೀಫ್ ಸಿಕ್ಕಿದೆ.
ಡಿಕೆಶಿ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕದ ಹಿನ್ನೆಲೆಯಲ್ಲಿ ಗುರುವಾರ ಮುನ್ನೆಚ್ಚರಿಕಾ ಕ್ರಮವಾಗಿ ಸಹೋದರ, ಸಂಸದ ಡಿ.ಕೆ ಸುರೇಶ್ ಸಹ ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇಂದಿನಿಂದ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರ ನಾಮಪತ್ರ ಅಂಗೀಕಾರವಾಗಿದೆ. ಏಪ್ರಿಲ್ 17 ರಂದು ಕಾರ್ಯಕರ್ತರೊಂದಿಗೆ ಬೈಕ್ ರ್‍ಯಾಲಿ ಮೂಲಕ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ಡಿ ಕೆ ಶಿವಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದರು. ರ್‍ಯಾಲಿ ವೇಳೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.
ಡಿಕೆಶಿ ಆಸ್ತಿ ಎಷ್ಟಿದೆ?: ಒಟ್ಟು 1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ಡಿಕೆಶಿ ಅವರು ತಮ್ಮ ಆಸ್ತಿ ವಿವರ ನೀಡಿದ್ದರು. ಡಿಕೆಶಿ ಅವರ ವೈಯಕ್ತಿಕ ಆಸ್ತಿಯೇ ₹1,214 ಕೋಟಿ ದಾಟಿದ್ದು, ಅವರ ಪತ್ನಿ ಉಷಾ 133 ಕೋಟಿ ಹಾಗೂ ಪುತ್ರ ಆಕಾಶ್ ₹66 ಕೋಟಿ ಆಸ್ತಿ ಹೊಂದಿರುವುದು ಅಫಿಡವಿಟ್ನಲ್ಲಿತ್ತು. ಜೊತೆಗೆ ಡಿಕೆಶಿ ಬಳಿ ₹970 ಕೋಟಿ ಸ್ಥಿರಾಸ್ತಿ, ₹244 ಕೋಟಿ ಚರಾಸ್ತಿ ಇದ್ದು, ₹226 ಕೋಟಿ ಸಾಲ ಹೊಂದಿರುವ ಮಾಹಿತಿ ಇತ್ತು. 2013ರಲ್ಲಿ ಡಿಕೆಶಿ ಕುಟುಂಬದ ಆದಾಯವು ₹252 ಕೋಟಿ ಇತ್ತು. ಅದು 2018ರಲ್ಲಿ ₹840 ಕೋಟಿಗೆ ಏರಿಕೆ ಆಗಿತ್ತು. ಈಗ 1214 ಕೋಟಿಗೆ ಏರಿದೆ.