ರಾಮನಗರ:ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಯಾರು ಏನೇ ಬೊಬ್ಬೆ ಹೊಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ರಾಮನಗರ ತಾಲೂಕಿನ ಹರೀಸಂದ್ರ ಗ್ರಾಮದಲ್ಲಿ ತಮ್ಮ ಆಪ್ತ ಕೆಆರ್ಐಡಿಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ಮಾಲೀಕತ್ವದ ರವಿಶಿಂಗ್ ರಿಟ್ರೀಟ್ ರೆಸಾರ್ಟ್ (Ravishing Retreat Resort) ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಎಸ್ವೈ, ಭಾರತ್ ಜೋಡೋ ಯಾತ್ರೆಗೆ ಹೆದರಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ, ಉತ್ತರ ಪ್ರದೇಶದಲ್ಲಿ ಅವರ ಸಹೋದರಿ (ಪ್ರಿಯಾಂಕ ವಾದ್ರ) ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಅಭ್ಯರ್ಥಿ ಮಾಡಿದ್ದರು. ಆದರೂ 2 ಸೀಟ್ ಗೆಲ್ಲಲು ಅಗಲಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ನ ಅಡ್ರೆಸ್ ಇಲ್ಲದಂತಾಗಿದೆ. ಎಲ್ಲೋ ಒಂದೆರಡು ಕಡೆ ಇದ್ದು, ಕರ್ನಾಟಕದಲ್ಲಿ ಉಸಿರಾಡುತ್ತಿದೆ. ಹಾಗಾಗಿ ಇಲ್ಲಿಗೆ ಬಂದು ಮನಬಂದಂತೆ ಮಾತನಾಡಿದರೆ ಪ್ರಯೋಜನ ಇಲ್ಲ. ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್ನವರು ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.