ರಾಮನಗರ :ನೂತನ ದಶಪಥ ರಸ್ತೆಯಲ್ಲಿರುವ ಸ್ಟೀಲ್ ಬ್ರಿಡ್ಜ್ ರಸ್ತೆ ಮೂರೇ ದಿನಕ್ಕೆ ದುರಸ್ತಿಗೆ ಬಂದಿದೆ. ಬಿಡದಿ ಬಳಿ ಇರುವ ಸ್ಟೀಲ್ ಬ್ರಿಡ್ಜ್ ಮೇಲೆ ಭಾರೀ ವಾಹನಗಳ ಓಡಾಟದ ವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಈ ಬೆನ್ನಲ್ಲೇ ಹೆದ್ದಾರಿ ಸಿಬ್ಬಂದಿ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ. ಕಳೆದ ಮಾರ್ಚ್ 12ರಂದು ಬೆಂಗಳೂರು ಮತ್ತು ಮೈಸೂರು ನಡುವಿನ ಹೆದ್ದಾರಿಯನ್ನು ಪ್ರಧಾನಿ ಉದ್ಘಾಟಿಸಿದ್ದರು. ನಿತ್ಯ ಈ ಹೆದ್ದಾರಿಯಲ್ಲಿ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಆದರೆ, ಈಗ ದಶಪಥ ಹೆದ್ದಾರಿ ಕಾಮಗಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬ್ರಿಡ್ಜ್ ಮೇಲ್ಬಾಗದಲ್ಲಿ ಕಂಬಿಗಳನ್ನು ಇಟ್ಟು ದಶಪಥ ಹೆದ್ದಾರಿ ಸಿಬ್ಬಂದಿ ವೆಲ್ಡ್ ಮಾಡಿ ಸಿಮೆಂಟ್ ಮಿಕ್ಸಿಂಗ್ ಕಾಮಗಾರಿ ಮಾಡುತ್ತಿದ್ದಾರೆ.
'ಅದು ಕಟ್ ಆಗಿಲ್ಲ. ಮೆಟಲ್ ಜಾಯಿಂಟ್ ಮಾಡಲಾಗಿದ್ದು ಇದರ ಸಾಮರ್ಥ್ಯಕ್ಕೂ ಮೀರಿ ವಾಹನಗಳು ವೇಗವಾಗಿ ಓಡಾಡಿದ್ದರಿಂದ ಸ್ವಲ್ಪ ತೊಂದರೆ ಆಗಿದೆ. ಇದರಿಂದ ವೆಲ್ಡಿಂಗ್ನಲ್ಲಿ ತುಸು ಹೆಚ್ಚು ಕಡಿಮೆ ಆಗಿದೆ. ಅದನ್ನು ಹಾಗೇ ಬಿಟ್ಟರೆ ತೊಂದರೆ ಆಗಬಹುದು ಎಂಬ ಉದ್ದೇಶದಿಂದ ಸರಿಪಡಿಸಲಾಗುತ್ತಿದೆ. ಅದರ ನಿರ್ವಹಣೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಸಂಭವಿಸುವ ಅನಾಹುತಗಳನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇವೆ ಹೊರತು ಇನ್ನೇನು ಅಲ್ಲ' ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶ್ರೀಧರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಂಸದರ ಟ್ವೀಟ್ ನಲ್ಲಿ ಏನಿದೆ?:ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿರುವ ದುರಸ್ತಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ. ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ ಎಂದು ಇಂದು ಬೆಳಗ್ಗೆಯೇ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದರು.
ಕ್ಯಾಬಿನೆಟ್ನಿಂದ ಆರು ಪಥದ ರಸ್ತೆಗಷ್ಟೇ ಅನುಮೋದನೆ: ಮೈಸೂರು ಬೆಂಗಳೂರು ನೂತನ ಹೆದ್ದಾರಿ ದಶಪಥ ಹೆದ್ದಾರಿ ಅಲ್ಲ. ಇದು ಕೇವಲ ಆರು ಪಥದ ರಸ್ತೆ ಅಷ್ಟೇ. ಆರು ಪಥದ ರಸ್ತೆಗಷ್ಟೇ ಕ್ಯಾಬಿನೆಟ್ ಅನುಮೋದನೆ ದೊರೆತಿದ್ದು, ನಾವು ಸರ್ವಿಸ್ ರಸ್ತೆ ಕೊಟ್ಟಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ ಶ್ರೀಧರ್ ತಿಳಿಸಿದ್ದಾರೆ.