ರಾಯಚೂರು: ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಕೆಲವರು ಅನಧಿಕೃತ ಪಂಪ್ಸೆಟ್ ಮೂಲಕ ನೀರು ಕಳ್ಳತನ ಮಾಡುವ ಹಿನ್ನೆಲೆಯಲ್ಲಿ ಕಾಲುವೆ ಕೊನೆ ಭಾಗದ ರೈತರು ನೀರು ಸಿಗದೆ ಪರದಾಡುತ್ತಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಕೊನೆ ಭಾಗದ ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಹಲವಾರು ಸಭೆ ಹಾಗೂ ಹೋರಾಟಗಳನ್ನು ನಡೆಸಲಾಗಿದೆ. ಸ್ವತಃ ಎಸ್ಪಿ ನೇತೃತ್ವದಲ್ಲಿ ಡಂಗೂರ ಸಾರುವ ಮೂಲಕ ಅನಧಿಕೃತವಾಗಿ ನೀರು ಬಳಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ನೀರು ಕಳ್ಳತನ ನಿಂತಿಲ್ಲ.
ಮೇಲ್ಭಾಗದ ರೈತರು ಹಾಗೂ ಕೆಲ ರಾಜಕೀಯ ನಾಯಕರ ಬೆಂಬಲಿಗರು ಅನಧಿಕೃತ ಪಂಪ್ಸೆಟ್ ಮೂಲಕ ನೀರು ಕಳ್ಳತನ ಮಾಡುತ್ತಿದ್ದಾರೆ ಎಂಬ ಆರೋಪವಿದೆ.
ನಿಲ್ಲದ ತುಂಗಭದ್ರಾ ನೀರು ಕಳ್ಳತನ ಈ ಹಿನ್ನೆಲೆಯಲ್ಲಿ ನೀರು ಕಳ್ಳತನಕ್ಕೆ ಕಡಿವಾಣ ಹಾಕಲು ಪಂಪ್ಸೆಟ್ಗಳಿಗೆ ಇರುವ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ನಾಲೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನೋಡಿಕೊಂಡಿದ್ದರು. ಜೊತೆಗೆ ಪೊಲೀಸರು ನಾಲೆಯ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಬಿಸಿ ಮುಟ್ಟಿಸಿದ್ದರು. ಅನಧಿಕೃತವಾಗಿ ನೀರನ್ನು ಬಳಸುವವರು ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತೆ ಎಂಬ ಎಚ್ಚರಿಕೆಯನ್ನೂ ನೀಡಲಾಗುತಿತ್ತು. ಆದರೂ ಸಹ ನೀರು ಕಳ್ಳತನ ಮಾತ್ರ ನಿಲ್ಲುತ್ತಿಲ್ಲ ಎನ್ನಲಾಗಿದೆ.