ರಾಯಚೂರಿನಲ್ಲಿ ಅಕ್ಕಿ ಬೆಲೆ ಏರಿಕೆ ರಾಯಚೂರು:ಜಿಲ್ಲೆಯಲ್ಲಿ ದೊರೆಯುವ ಸೋನಮಸೂರಿ ಅಕ್ಕಿಗೆ ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಪ್ರಸ್ತುತ ವರ್ಷದಲ್ಲಿ ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದ ಪರಿಣಾಮದಿಂದ ಎರಡನೇ ಭತ್ತದ ಬೆಳೆಗೆ ನೀರಿನ ಕೊರತೆಯಾಗಿದೆ. ಇರುವ ಬೆಳೆಗೆ ಭಾರಿ ಬೇಡಿಕೆ ಇರುವುದರಿಂದ ಮುಂಬರುವ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಜಲಾಶಯಗಳ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ರಾಯಚೂರು ಜಿಲ್ಲೆಗೆ ಕೃಷಿ ಅವಲಂಬಿತ ನದಿಗಳಾದ ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ (ಮೊದಲ) ಭತ್ತದ ಬೆಳೆಗೆ ರೈತರಿಗೆ ಸಂಪರ್ಕವಾಗಿ ನೀರು ದೊರೆತಿಲ್ಲ. ಹೀಗಾಗಿ ತುಂಗಭದ್ರಾ ಎಡದಂಡೆ ನಾಲೆಯ ಕೆಳ ಭಾಗದ ರೈತರ ಭತ್ತ ಬೆಳೆಗೆ ನೀರು ದೊರೆಯದೇ ಕೆಲ ರೈತರ ಬೆಳೆ ನಷ್ಟವಾಗಿತ್ತು. ಇದರ ಮಧ್ಯೆ ನೀರು ದೊರೆತ ರೈತರು ಕಾಲುವೆಯ ನೀರು, ಬೋರ್‌ವೆಲ್, ಕೆರೆಯ ನೀರಿನಿಂದ ಭತ್ತ ಬೆಳೆದಿದ್ದರೂ ನಿರೀಕ್ಷೆಯಂತೆ ಬೆಳೆ ಬಂದಿಲ್ಲ. ಆದರೂ ಬೆಳೆ ಮಾರುಕಟ್ಟೆಗೆ ಬಂದಿದೆ. ನೀರಿನ ಸಮಸ್ಯೆಯಿಂದ ಎರಡನೇ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದ್ದು ಬೆಲೆ ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಸೋನಾಮಸೂರಿ, ಆರ್‌ಎನ್‌ಆರ್ ಅಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಸೋನಾಮಸೂರಿ ಅಕ್ಕಿ ಜನಪ್ರಿಯವಾಗಿದ್ದು, ಬಹಳ ಬೇಡಿಕೆಯಿದೆ. ಇದರ ನಂತರ ಈಗ ರೈತರು ಆರ್‌ಎನ್‌ಆರ್ ಅಕ್ಕಿ ಬೆಳೆಯುತ್ತಿದ್ದಾರೆ. ಬೇಸಿಗೆಯಲ್ಲಿ (ಎರಡನೇ ಬೆಳೆ) 94 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿಲ್ಲದ ಕಾರಣ ಭತ್ತ ಬೆಳೆಯಲಾಗುತ್ತಿಲ್ಲ. ಇದಕ್ಕೆ ಬದಲಾಗಿ ಬೋರ್‌ವೆಲ್, ಜಮೀನಿನಲ್ಲಿ ಕೆರೆ ಮಾಡಿಕೊಂಡಿರುವ ರೈತರು ಅಲ್ಲಲ್ಲಿ ಭತ್ತ ಬೆಳೆಯುತ್ತಿದ್ದು, ಉಳಿದಂತೆ ಎರಡನೇ ಬೆಳೆ ಕೊರತೆಯಾಗಲಿದೆ.
2023-2024ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ರಾಯಚೂರು ಜಿಲ್ಲೆಯಲ್ಲಿ ನೀರಾವರಿ ಹಾಗೂ ಖುಷ್ಕಿ ಬೆಳೆಗಳು ಸೇರಿದಂತೆ ಒಟ್ಟು 5 ಲಕ್ಷ 41 ಸಾವಿರ 953 ಹೆಕ್ಟೇರ್ ಪ್ರದೇಶ ಗುರಿಯಿತ್ತು. ಇದರಲ್ಲಿ 4 ಲಕ್ಷ 56 ಸಾವಿರ 92 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಭತ್ತ ಬೆಳೆ 1 ಲಕ್ಷ 70 ಸಾವಿರ ಗುರಿ ಹೊಂದಿದ್ದರೆ, 1 ಲಕ್ಷ 50 ಸಾವಿರ ಹೆಕ್ಟೇರ್ ಭತ್ತ ಬಿತ್ತನೆಯಾಗಿದೆ. ಒಟ್ಟು ಶೇ.88 ಸಾಧನೆಯಾಗಿದೆ. ಒಟ್ಟು ಗುರಿಯಲ್ಲಿ 2 ಲಕ್ಷ 19 ಸಾವಿರ ಬರಗಾಲದಿಂದ ನಷ್ಟವಾಗಿದೆ. ಬೇಸಿಗೆ ಬೆಳೆಗೆ 94 ಸಾವಿರ ಭತ್ತ ಬೆಳೆಯ ಗುರಿ ಹೊಂದಲಾಗಿತ್ತು. ಆದರೆ ಬರಗಾಲದಿಂದ ತುಂಗಭದ್ರಾ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಭತ್ತ ಬೆಳೆಯುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ.ಆರ್ ಹೇಳಿದ್ದಾರೆ.
ರಾಯಚೂರಿನಲ್ಲಿ ಅಕ್ಕಿಗಿರಿಣಿಯಲ್ಲಿ ತಯಾರಾಗುವ ಅಕ್ಕಿಯನ್ನು ದಕ್ಷಿಣ ಭಾರತ, ಉತ್ತರ ಭಾರತ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಗಡ, ಗುಜರಾತ್, ಮಧ್ಯಪ್ರದೇಶ ಹಾಗೂ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಸೋನಾಮಸೂರಿ ಅಕ್ಕಿಗೆ 5,000ದಿಂದ 5,200 ರೂ.ವರೆಗೂ ದರವಿದೆ. ಕಳೆದ ವರ್ಷ 4,000ದಿಂದ 4,200 ರೂ.ವರೆಗೂ ದರವಿದ್ದು, ಈಗ ಸಾವಿರ ರೂಪಾಯಿ ಬೆಲೆ ಹೆಚ್ಚಾಗಿದೆ. ಆರ್‌ಎನ್‌ಆರ್ 5,500 ಸಾವಿರದಿಂದ 6,000 ರೂಪಾಯಿವರೆಗೂ ಇದ್ದು, ಕಳೆದ ವರ್ಷಕ್ಕಿಂತ ಒಂದು ಸಾವಿರ ರೂಪಾಯಿ ದುಬಾರಿಯಾಗಿದೆ.
ಮುಂದಿನ ದಿನಗಳಲ್ಲಿ ಭತ್ತದ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವು ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡದೇ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಹೀಗಾಗಿ ಬರಗಾಲದ ಪರಿಣಾಮದಿಂದ ಅಕ್ಕಿ ಬೆಲೆ ಹೆಚ್ಚಳವಾಗಿ, ಜನರ ಜೇಬಿಗೆ ಭಾರವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:ಅಯೋಧ್ಯೆಯ ಶ್ರೀರಾಮನಿಗೂ ಕೊಪ್ಪಳದ ಹನುಮ ಭಕ್ತನಿಗೂ ಇದೆ ನಂಟು