ಲಿಂಗಸುಗೂರು(ರಾಯಚೂರು): ತಾಯ್ನಾಡಿಗೆ ಕರೆ ತರುವಲ್ಲಿ ಭಾರತ ಸರ್ಕಾರದ ನಡೆ, ರಾಷ್ಟ್ರ ಧ್ವಜದ ಬಳಕೆಯ ಸಮಯ ಪ್ರಜ್ಞೆ ಸುರಕ್ಷತೆಗೆ ಸಾಕ್ಷಿಯಾದವು ಎಂದು ಖಾರ್ಕಿವ್ ಎಂಬಿಬಿಎಸ್ ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಹೂಗಾರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ಗೆ ಸೇರ್ಪಡೆ ಆಗಿದ್ದೆ. ರಷ್ಯಾ ಉಕ್ರೇನ್ ಯುದ್ಧ ಸಂಭವ ಕುರಿತು ವಿದೇಶಾಂಗ ಇಲಾಖೆ ಮಾಹಿತಿ ನೀಡಿತ್ತು. ಆದರೆ 3ನೇ ವರ್ಷದ ಎಲಿಜಿಬಿಲಿಟಿ ಪರೀಕ್ಷೆ ಹಾಗೂ ವಿವಿ ತರಗತಿ ನಡೆಸುತ್ತೇವೆ ಎಂಬ ಗೊಂದಲ ಯುದ್ಧದಲ್ಲಿ ಸಿಲಕುವಂತೆ ಮಾಡಿತು.
ವಿವಿಯಲ್ಲಿ ನೈಜೇರಿಯಾ, ಅರಬ್, ಮಂಗೋಲಿಯಾ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿ ಸಮೂಹ ಇತ್ತು. ಏಕಾಏಕಿ ಯುದ್ಧ ಆರಂಭಗೊಂಡು ಭಯಭೀತರನ್ನಾಗಿಸಿತ್ತು. ಒಂದು ವಾರ ಬಂಕರ್ನಲ್ಲಿಯೇ ಸಮಸ್ಯೆಗಳ ಮಧ್ಯೆ ಬದುಕಿದೆವು. ಬಳಿಕ ವಿದೇಶಾಂಗ ಇಲಾಖೆ ಸೂಚನೆ ಮೇರೆಗೆ ತ್ರಿವರ್ಣ ಧ್ವಜ ಹಿಡಿದು ಖಾರ್ಕಿವ್ ರೈಲ್ವೆ ನಿಲ್ದಾಣ ತಲುಪಿ, ಅಲ್ಲಿಂದ ಹರಸಾಹಸ ಪಟ್ಟು ಲಿವಿವ್ ತಲುಪಿದೆವು.