ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದ ಗಣಿಯಲ್ಲಿ ಶಾಸಕ ಡಿ.ಎಸ್. ಹೂಲಗೇರಿ ಆಗಮಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ನಿಷೇಧಾಜ್ಞೆ ಉಲ್ಲಂಘಿಸಿ ಭಾಗವಹಿಸಿದ್ದಾರೆ.
ಭಾನುವಾರ ಹಟ್ಟಿ ಚಿನ್ನದ ಗಣಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ ಅವರ ಜೊತೆ ಶಾಸಕ ಹೂಲಗೇರಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಕುರಿತು ಕೈಗೊಳ್ಳಲಾದ ಅಗತ್ಯ ಕ್ರಮಗಳ ಪರಿಶೀಲನೆಗೆ ಆಗಮಿಸಿದ್ದರು.
ನಿಷೇಧಾಜ್ಞೆ ಉಲ್ಲಂಘಿಸಿ ಸೇರ್ಪಡೆಗೊಂಡ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಗ್ರಾಮದ ಕೆಲ ಮುಖಂಡರು ಕೊರೊನಾ ತಡೆಗೆ ನಡೆಯುತ್ತಿರುವ ಲಾಕ್ ಡೌನ್ ಹೆಸರಿನಲ್ಲಿ ಪೊಲೀಸ್ ಅಧಿಕಾರಿಗಳು ನಡೆಸುತ್ತಿರುವ ದಬ್ಬಾಳಿಕೆ ಕುರಿತು ಗಮನ ಸೆಳೆಯಲು ಮುಂದಾದಾಗ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಶಾಸಕ ಹೂಲಗೇರಿ ಮಾತನಾಡಿ, ಈಗ ಚರ್ಚಿಸುವ ಸಮಯವಲ್ಲ, ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುವೆ ಎಂದು ಹೇಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ತೆರವುಗೊಳಿಸಿ ವಾಪಸಾದರು.