ರಾಯಚೂರು :ಕಾಂಗ್ರೆಸ್ ಆರಂಭಿಸಿರುವ ಬಸ್ ಯಾತ್ರೆ ದಿಕ್ಕು ದೆಸೆಯಿಲ್ಲದ ಯಾತ್ರೆಯಾಗಿದೆ ಎಂದು ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿರುವ ಮೂರು ದಿನದ ಕೃಷಿ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಜನ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡುತ್ತಾರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿಕೊಂಡು ಬಸ್ ಯಾತ್ರೆ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಈ ಇಬ್ಬರ ಬಗ್ಗೆಯೂ ಜನರಿಗೆ ತಿಳಿದಿದೆ. ಇದೊಂದು ಸುಳ್ಳಿನ ಯಾತ್ರೆ ಎಂದು ಟೀಕಿಸಿದರು. ಈ ಸುಳ್ಳಿನ ಶೂರರ ಮಾತುಗಳನ್ನು ಜನರು ಕೇಳಲ್ಲ. ಕಾಂಗ್ರೆಸ್ ನಾಯಕರು ಯಾವುದೇ ಯಾತ್ರೆ ಮಾಡಿದರೂ, ರಾಜ್ಯದಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡುತ್ತಾರೆ. ರಾಜ್ಯದಲ್ಲಿ, ದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದು, ಒಳ್ಳೆಯ ಕೆಲಸ ಮಾಡುತ್ತಿದೆ. 2023ರಲ್ಲಿ ಪುನಃ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್. ವಿಶ್ವನಾಥ್ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ನಮ್ಮ ಪಕ್ಷದ ಹಿರಿಯ ನಾಯಕರು. ವಿಶ್ವನಾಥ್ ಅವರು ಮೊದಲ ಬಾರಿಗೆ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಚುನಾವಣೆ ಸೋತ ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ಅವರಿಗೆ ಮನಸ್ಸಿಗೆ ಬೇಸರವಾಗಿದ್ದರೆ, ನಮ್ಮ ಸಿಎಂಗೆ ಮತ್ತು ಪಕ್ಷದ ಮುಖಂಡರಿಗೆ ಮಾತುಕತೆ ನಡೆಸಲು ಹೇಳಿದ್ದೇನೆ. ವಿಶ್ವನಾಥ್ ಅವರ ಮನವೊಲಿಸುವ ಕೆಲಸ ಮಾಡುವುದಾಗಿ ಹೇಳಿದರು. ಸಾರಿಗೆ ಇಲಾಖೆಯಲ್ಲಿ ಹೊಸ ಬಸ್‌ಗಳನ್ನು ಖರೀದಿಸುವುದಕ್ಕೆ ತೀರ್ಮಾನಿಸಿಸಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಶುರುವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದ ಹೆಚ್ ವಿಶ್ವನಾಥ್ :ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ ಇಂದು ತಾವು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ರಕ್ತನೇ ಕಾಂಗ್ರೆಸ್. ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ. ಇನ್ನು ಉತ್ತರಾಯಣ ಪುಣ್ಯ ಕಾಲಕ್ಕೆ ಮುಂಚೆ ಬಂದು ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದರು.
ರಾಜಕಾರಣ ಒಂದು ಕುಟುಂಬ ಇದ್ದ ಹಾಗೆ. ಅಣ್ಣ ತಮ್ಮ ಮುನಿಸಿಕೊಂಡು ಹೊರ ಹೋಗುತ್ತಾರೆ. ಮತ್ತೆ ಮರಳಿ ಬರುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಬೆಳೆದವರು. ಸಿದ್ದರಾಮಯ್ಯಗೆ ಕೋಲಾರದಲ್ಲಿ ನಿಲ್ಲಬೇಕು ಅನಿಸಿದೆ. ಅದಕ್ಕೆ ಅಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಅವರು ಅಲ್ಲಿ ಸ್ಪರ್ಧೆಗೆ ಮಾಡುವುದಕ್ಕೆ ಮುಂದಾಗಿದ್ದಾರೆ. ಮತದಾರರ ತೀರ್ಮಾನ ಅಂತಿಮವಾಗಿರುತ್ತದೆ ಎಂದರು.