ರಾಯಚೂರು:ಕೊರೊನಾ ಸೋಂಕಿನ ಭೀತಿಯಿಂದ ರಾಜ್ಯದಲ್ಲಿನ ದೇವಾಲಯಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮ ದೇವಾಲಯಗಳ ಆದಾಯಕ್ಕೆ ಕತ್ತರಿ ಬಿದ್ದಿದ್ದೆ. ರಾಯಚೂರು ಜಿಲ್ಲೆಯ ಪ್ರಸಿದ್ಧ ದೇಗುಲಗಳಿಂದ ಬರುವ ಲಕ್ಷಾಂತರ ರೂಪಾಯಿ ಹಣಕ್ಕೆ ಕೊಕ್ಕೆ ಬಿದ್ದಿದೆ.
ದೇವಾಲಯಗಳ ಮೇಲೆ ಕೊರೊನಾ ಪರಿಣಾಮ ಕೊರೊನಾ ಲಾಕ್ಡೌನ್ನಿಂದ ಜಿಲ್ಲೆಯ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ, ಗುರುಗುಂಟಾದ ಶ್ರೀ ಅಮರೇಶ್ವರ ಸ್ವಾಮಿ ದೇವಾಲಯಗಳು ಬಂದ್ ಆಗಿದೆ. ರಾಯಚೂರು ತಾಲೂಕಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಾಗಿ ಮದುವೆ, ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು.
ಕಳೆದ 2019-2020 ಸಾಲಿನಲ್ಲಿ ಒಟ್ಟು 1,67,26000 ರೂ. ಹಣ ಸಂಗ್ರಹವಾಗಿತ್ತು. ಇದರಲ್ಲಿ ಮಾರ್ಚ್ ನಲ್ಲಿ 19,11,614 ರೂ., ಏಪ್ರಿಲ್-5,98,719, ಮೇ-18,14,019 ರೂ.,ಸಂಗ್ರಹವಾಗಿತ್ತು. ಆದ್ರೆ ಈ ಬಾರಿ ಲಾಕ್ಡೌನ್ ಘೋಷಣೆಯಾದ ಪರಿಣಾಮ ಒಂದು ರೂಪಾಯಿ ಕೂಡ ಆದಾಯವಿಲ್ಲ.
ಇನ್ನು ಶ್ರೀ ಸೂಗೂರೇಶ್ವರ ದೇವಾಲಯದಲ್ಲಿ 17 ಆರ್ಚಕರು ಕುಟುಂಬಗಳು ಇವೆ. ಈ ಕುಟುಂಬಗಳು ದೇವಾಲಯದ ಪೂಜೆಯಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತವೆ. ಹೀಗಾಗಿ ಲಾಕ್ಡೌನ್ ಅರ್ಚಕರ ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ.
ಲಿಂಗಸೂಗೂರು ತಾಲೂಕಿನ ದೇವರಭೂಪುರ ಗ್ರಾಮದ ಬಳಿ ಬರುವ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯಕ್ಕೆ ಕಳೆದ 2019-2020 ಸಾಲಿನಲ್ಲಿ 96 ಲಕ್ಷದ 20 ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಇದರಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ 5,17,903 ರೂಪಾಯಿ ಸಂಗ್ರಹವಾಗಿತ್ತು. ಆದ್ರೆ ಲಾಕ್ ಡೌನ್ ಪರಿಣಾಮ ಇಷ್ಟೊಂದು ಮೊತ್ತದ ಆದಾಯಕ್ಕೆ ಕತ್ತರಿ ಬಿದ್ದಿದೆ. ಜತೆಗೆ ದೇವಾಲಯದ ಆವರಣದಲ್ಲಿರುವ ಕುಂಕುಮ, ವಿಭೂತಿ, ಮಕ್ಕಳ ಆಟಿಕೆ ಸಾಮಾನು, ಹೋಟೆಲ್, ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಜನರು ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.