ರಾಯಚೂರು: ಸ್ಟೋನ್ ಕ್ರಷರ್ ಮಾಲೀಕ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಕೆ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗುಡ್ಡ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ತಾತ್ಕಾಲಿಕ ಮಷಿನ್ ಅಳವಡಿಸಲು ಕ್ರಷರ್ ಮಾಲೀಕ ಕೇವಲ 15 ತಿಂಗಳುಗಳಿಗೆ ಅನುಮತಿ ಪಡೆದಿದ್ದರು. ಈಗ ಅವಧಿ ಮುಗಿದರೂ ಸಪ್ತಗಿರಿ ಸ್ಟೋನ್ ಕ್ರಷರ್ ಮಾಲೀಕ ಶ್ರೀನಿವಾಸ್ ಹೆಚ್ ಅಮ್ಮಾಪುರ್, ಕೆಲಸ ಮುಂದುವರಿಸಿ, ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬೈಲಗುಡ್ಡದ ಸರ್ವೆ ನಂಬರ್ 14/2/2 ರಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. 31-12-2016ರಿಂದ 31-12-2017ರ ವರೆಗೆ ತಾತ್ಕಾಲಿಕ ಕ್ರಷರ್ ಮಷಿನ್ ಅಳವಡಿಸಲು ಅನುಮತಿ ಪಡೆದಿದ್ದು, ಈಗ ಈ ಅವಧಿ ಮುಗಿದಿದೆ. ಆದರೆ ಈಗಲೂ ಅವರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ, ಕ್ರಮ ಕೈಗೊಳ್ಳುತ್ತಿಲ್ಲ. ಇದರ ಹಿಂದೆ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಕೈವಾಡವೂ ಇದೆ ಎಂದು ಆರೋಪಿಸಿದರು.
ಈ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸುತ್ತಲಿನ ಅಂತರ್ಜಲ ಕುಸಿತ ಸೇರಿದಂತೆ ಜನ-ಜಾನುವಾರುಗಳಿಗೂ ತೊಂದರೆಯಾಗುತ್ತಿದೆ. ಪರಿಸರ ನಾಶ, ಬೆಳೆ ನಾಶದ ಜೊತೆ ಜೀವ ಸಂಕುಲಕ್ಕೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ತಹಶಿಲ್ದಾರ್ ಪರಿಶೀಲಿಸಿ ಲಿಂಗಸೂಗೂರು ತಾಲೂಕು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತವೂ ಇದನ್ನು ಪರಿಶೀಲಿಸಿ ಕ್ರಮಕ್ಕೆ ಸೂಚನೆ ನೀಡಿದೆ. ಅದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಹೀಗಾಗಿ ಶೀಘ್ರವೇ ಇತ್ತ ಗಮನಹರಿಸಿ ,ನೈಸರ್ಗಿಕ ಸಂಪತ್ತು ರಕ್ಷಿಸಬೇಕು. ಇಲ್ಲದೇ ಹೋದಲ್ಲಿ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.