ರಾಯಚೂರು: 'ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ' ಎಂಬ ಅಂತರಂಗದ ಚಳವಳಿ ಪರಿಕಲ್ಪನೆಯಡಿ ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಹವ್ಯಾಸಿ ಬರಹಗಾರರಾದ ಹೆಚ್.ಕೆ. ವಿವೇಕಾನಂದ ಅವರು ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜದ ಪರಿಕಲ್ಪನೆ: ಬೀದರ್ನಿಂದ ಚಾಮರಾಜನಗರದವರೆಗೆ ಹವ್ಯಾಸಿ ಬರಹಗಾರನ ಪಾದಯಾತ್ರೆ
ಪ್ರಸ್ತುತ ಮಾನವೀಯ ಮೌಲ್ಯಗಳು ಮರೆಯಾಗುತ್ತಿದ್ದು, ಈ ಬಗ್ಗೆ ಸಂವಾದ, ಚರ್ಚೆ ನಡೆಸುವ ಉದ್ದೇಶದಿಂದ ಹವ್ಯಾಸಿ ಬರಹಗಾರರಾದ ಹೆಚ್.ಕೆ ವಿವೇಕಾನಂದ ಅವರು ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಕಳೆದ 43 ದಿನಗಳ ಹಿಂದೆಯೇ ಬೀದರ್ ಜಿಲ್ಲೆಯಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಭಾನುವಾರ ಸಂಜೆ ರಾಯಚೂರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇಂದು ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು ಅವುಗಳನ್ನು ಪುನರುತ್ಥಾನ ಮಾಡುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಇದು ಯುವ ಜನರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯವಾಗಿದ್ದು, ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸಮಾಜದಲ್ಲಿ ಸಣ್ಣ ಸಣ್ಣ ಬದಲಾವಣೆ ತರುವುದು ಅವಶ್ಯಕ. ಹಾಗಾಗಿ ನಾನು ಜೀವನ ಪರ್ಯಂತ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇನೆ ಎಂದರು.
ಕಳೆದ 43 ದಿನಗಳಿಂದ ಸಾವಿರಕ್ಕೂ ಹೆಚ್ಚು ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾವಿರಾರು ಜನರಿಗೆ ಮಾನವೀಯ ಮೌಲ್ಯಗಳ ಕುರಿತು ತಿಳಿಹೇಳುವ ಕಾರ್ಯ ಮಾಡಲಾಗಿದೆ. ಇದರಿಂದಾಗಿ ಕೆಲವರು ಬದಲಾವಣೆಯತ್ತ ಹೆಜ್ಜೆ ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆ. ನವೆಂಬರ್ 1 ರಿಂದ ಆರಂಭವಾದ ಪಾದಯಾತ್ರೆ ನಿರಂತರವಾಗಿ ನಡೆಯುತ್ತಿದೆ ಎಂದು ವಿವೇಕಾನಂದ ವಿವರಿಸಿದರು.