ರಾಯಚೂರು : ಬೆಳೆದ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಲಾಕ್ಡೌನ್ ಬರೆ ಹಾಕಿದೆ. ಜಿಲ್ಲೆಯಲ್ಲಿ ಬದನೆಕಾಯಿಗೆ ಸರಿಯಾದ ದರ ಸಿಗದ ಹಿನ್ನೆಲೆ ರೈತರೊಬ್ಬರು ಬೆಳೆಯನ್ನು ತನ್ನ ಕೈಯಾರೆ ನಾಶ ಮಾಡಿದ್ದಾರೆ.
ಬದುಕು ಕಟ್ಟಿಕೊಡಬೇಕಿದ್ದ ಬದನೆಗೆ ಬೆಲೆ ಇಲ್ಲದೆ ಬೆಳೆ ನಾಶ ಮಾಡಿದ ರೈತ
ಲಾಕ್ಡೌನ್ನಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ರಾಯಚೂರು ತಾಲೂಕಿನ ಪಲ್ಕಂದೊಡ್ಡಿ ಗ್ರಾಮದ ರೈತರೊಬ್ಬರು ಬದನೆಕಾಯಿ ಬೆಳೆಯನ್ನೆ ನಾಶ ಮಾಡಿದ್ದಾರೆ.
ಬೆಸಿಗೆ ಕಾಲದಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ. ಬದನೆಕಾಯಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಲಕ್ಷಾಂತರ ರೂ. ಖರ್ಚುಮಾಡಿ ಎರಡು ಎಕರೆ ಪ್ರದೇಶದಲ್ಲಿ ಉತ್ತಮ ಬದನೆಕಾಯಿ ಬೆಳೆದಿದ್ದ ಬಸವರಾಜ ಲಾಕ್ ಡೌನ್ ಹಿನ್ನಲೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಕಾರಣ ಬದನೆ ಸಸ್ಯಗಳನ್ನು ಕಿತ್ತು ಹಾಕಿದ್ದಾರೆ.
ಉತ್ತಮ ಫಸಲು ಬಂದು ಕಷ್ಟಗಳು ನಿವಾರಣೆಯಾಗಬೇಕಿದ್ದ ಸಂದರ್ಭದಲ್ಲಿ, ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಚೀಲ ಬದನೆಗೆ ಕೇವಲ 30 ರೂ. ದರ ದೊರೆಯುತ್ತಿದೆ. ರೈತ ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಸಹ ಮರಳಿ ಬಾರದಿರುವುದರಿಂದ ರೈತರು ನೊಂದಿದ್ದಾರೆ.