ಕರ್ನಾಟಕ

karnataka

ETV Bharat / state

ಯಾವುದಕ್ಕೂ ಬಾರದ 1.5 ಕೋಟಿ ರೂ. ವೆಚ್ಚದ ಕುಡಿವ ನೀರಿನ ಯೋಜನೆ

ಮಾರಲದಿನ್ನಿ ಬಳಿ ಮಸ್ಕಿನಾಲಾ ಯೋಜನೆ ಹಿನ್ನೀರಲ್ಲಿ ಜಾಕ್​​ವೆಲ್​ ನಿರ್ಮಿಸಿ ರೇಸಿಂಗ್ ಪೈಪ್ ಮೂಲಕ ನೀರು ಎತ್ತಿ ಸಂತೆ ಕೆಲ್ಲೂರು ಬಳಿ ನಿರ್ಮಿಸಿದ ಜಲ ಶುದ್ಧೀಕರಣ ಘಟಕಕ್ಕೆ ಸಂಗ್ರಹಿಸಿ, ಶುದ್ಧೀಕರಿಸಿ ಮೂರು ಗ್ರಾಮಗಳಿಗೆ ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟೆಯಿಂದ ಕುಡಿಯುವ ನೀರು ಪೂರೈಸುವ ಕನಸು ಇನ್ನೂ ಕೂಡಾ ಸಾಕಾರಗೊಂಡಿಲ್ಲ.

water purifying
water purifying

By

Published : Jul 17, 2020, 11:23 AM IST

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಸಂತೆಕೆಲ್ಲೂರು ಬಹುಗ್ರಾಮ ಕುಡಿವ ನೀರಿನ ಯೋಜನೆ ಒಂದೂವರೆ ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಂಡಿದ್ದರೂ ಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಷ್ಪ್ರಯೋಜಕವಾಗಿದೆ.

ವಿಶ್ವಬ್ಯಾಂಕ್ ನೆರವಿನ ಜಲನಿರ್ಮಲ ಯೋಜನೆಯಡಿ 1.5 ಕೋಟಿ ರೂ. ಅನುದಾನದಡಿ ಸಂತೆಕೆಲ್ಲೂರು, ಬೇಡರ ಕಾರ್ಲಕುಂಟಿ, ಮುಸ್ಲಿ ಕಾರ್ಲಕುಂಟಿ ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ 2011ರಲ್ಲಿ ಉದ್ಘಾಟನೆಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಹನಿ ನೀರು ಪೂರೈಸದಿರುವುದು ವಿಪರ್ಯಾಸ.

ಕುಡಿವ ನೀರಿನ ಯೋಜನೆ ನಿಷ್ಪ್ರಯೋಜಕ

ಮಾರಲದಿನ್ನಿ ಬಳಿ ಮಸ್ಕಿನಾಲಾ ಯೋಜನೆ ಹಿನ್ನೀರಲ್ಲಿ ಜಾಕ್​ವೆಲ್ ನಿರ್ಮಿಸಿ ರೇಸಿಂಗ್ ಪೈಪ್ ಮೂಲಕ ನೀರು ಎತ್ತಿ ಸಂತೆಕೆಲ್ಲೂರು ಬಳಿ ನಿರ್ಮಿಸಿದ ಜಲ ಶುದ್ಧೀಕರಣ ಘಟಕಕ್ಕೆ ಸಂಗ್ರಹಿಸಿ, ಶುದ್ಧೀಕರಿಸಿ ಮೂರು ಗ್ರಾಮಗಳಿಗೆ ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟೆಯಿಂದ ಕುಡಿಯುವ ನೀರು ಪೂರೈಸುವ ಕನಸು ಸಾಕಾರಗೊಂಡಿಲ್ಲ.

2011ರಲ್ಲಿ ಬೇಸಿಗೆಯಲ್ಲಿ ಮಸ್ಕಿ ನಾಲಾದಲ್ಲಿ ನೀರು ಖಾಲಿ ಆಗಿದ್ದಾಗ ಟ್ಯಾಂಕರ್ ಮೂಲಕ ನೀರು ಭರ್ತಿ ಮಾಡಿ ಜಲಶುದ್ಧೀಕರಣ ಘಟಕ ಉದ್ಘಾಟಿಸಲಾಗಿತ್ತು. ಈವರೆಗೆ ಶಾಸಕರು, ಸಂಸದರು, ಸಚಿವರು, ಅಧಿಕಾರಿ ವರ್ಗ ಒಮ್ಮೆಯಾದರೂ ಈ ಯೋಜನೆ ಏನಾಯ್ತು ಅಂತ ಗಮನ ಹರಿಸದೇ ಕೋಟ್ಯಂತರ ಹಣ ವ್ಯರ್ಥ ಪೋಲು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೂರು ಗ್ರಾಮಗಳ ಪಂಚಾಯಿತಿ ಸದಸ್ಯರು ಹಣಕಾಸು ಯೋಜನೆಯಡಿ ಹಣ ಖರ್ಚು ಹಾಕಿಸುವ ಭರದಲ್ಲಿ ಈ ಯೋಜನೆ ಬಗ್ಗೆ ಕಿಂಚಿತ್ತು ಚಿಂತನೆ ಮಾಡುತ್ತಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ. ಒಂಬತ್ತು ವರ್ಷದಿಂದ ಸಮಸ್ಯೆ ಅನುಭವಿಸುತ್ತಿರುವ ಜನಸಾಮಾನ್ಯರ ನೋವಿಗೆ ಸ್ಪಂದಿಸುವರೇ ಎಂದು ಕಾದು ನೋಡಬೇಕಷ್ಟೆ.

ಸಮಾಜ ಸೇವಕ ಚಂದ್ರರೆಡ್ಡಿ ದೇಸಾಯಿ ಮಾತನಾಡಿ, ಒಂಭತ್ತು ವರ್ಷದ ಹಿಂದೆ ಒಂದೂವರೆ ಕೋಟಿ ಹಣದಲ್ಲಿ ಉದ್ಘಾಟನೆಗೊಂಡ ಯೋಜನೆ ಇಂದಿಗೂ ಒಂದು ಕೊಡ ನೀರು ಪೂರೈಸಿಲ್ಲ. ಕುಡಿಯುವ ನೀರಿನ ಯೋಜನೆಯೊಂದು ಇಷ್ಟು ನಿರ್ಲಕ್ಷಕ್ಕೆ ಒಳಪಟ್ಟಿದ್ದು, ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಯೋಜನೆ ಪುನಶ್ಚೇತನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details