ಲಿಂಗಸುಗೂರು: ಕೃಷ್ಣಾ ನದಿ ಪ್ರವಾಹದ ನಡುಗಡ್ಡೆ ಸಂತ್ರಸ್ತರ ಶಾಶ್ವತ ಸ್ಥಳಾಂತರಕ್ಕೆ ಆಗ್ರಹಿಸಿ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ) ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭಗೊಂಡಿತು.
ಕೃಷ್ಣಾ ನಡುಗಡ್ಡೆ ಸಂತ್ರಸ್ತರ ಶಾಶ್ವತ ಸ್ಥಳಾಂತರಕ್ಕೆ ಆಗ್ರಹ; ಅಹೋರಾತ್ರಿ ಧರಣಿ
ಕೃಷ್ಣಾ ನದಿ ಪ್ರವಾಹದ ನಡುಗಡ್ಡೆ ಸಂತ್ರಸ್ತರಿಗೆ ಶಾಶ್ವತ ಸ್ಥಳಾಂತರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭಗೊಂಡಿತು.
ರಾಯಚೂರು ಜಿಲ್ಲೆಯ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಜನರನ್ನು ಕೃಷ್ಣಾ ನದಿ ಪ್ರವಾಹ ಬಂದಾಗೊಮ್ಮೆ ಈಚೆಗೆ ಕರೆತಂದು ಗಂಜಿ ಕೇಂದ್ರದಲ್ಲಿ ಇರಿಸಿ ಪ್ರವಾಹ ಕ್ಷೀಣಿಸಿದಾಕ್ಷಣ ಮರಳಿ ಬಿಡುತ್ತಿರುವುದು ತೊಂದರೆ ಆಗುತ್ತಿದೆ. ಹದಿನೈದು ವರ್ಷಗಳಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆಗಳು ಹುಸಿಯಾಗಿವೆ. ಮುಂಗಾರು ಕೃಷಿ ಚಟುವಟಿಕೆ ನಡೆಯುವಾಗ ಒಕ್ಕಲೆಬ್ಬಿಸುತ್ತ ಬದುಕು ಮೂರಾಬಟ್ಟೆಯಾಗುತ್ತ ಬಂದಿದೆ ಎಂದು ಸಂತ್ರಸ್ತರು ಆರೋಪಿಸಿದರು.
ನಡುಗಡ್ಡೆ ಪ್ರದೇಶದ ಜನರ ಶಾಶ್ವತ ಸ್ಥಳಾಂತರಕ್ಕೆ ಆಡಳಿತ ಮುಂದಾಗಬೇಕು. ಸರ್ಕಾರದಿಂದ ನೀಡುವ ಸೌಲಭ್ಯ ಕಲ್ಪಿಸಬೇಕು. ಪರಿಶಿಷ್ಟರೆಂದು ನಿರ್ಲಕ್ಷ್ಯ ವಹಿಸಿದರೆ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸಂಘಟಕರು ಎಚ್ಚರಿಕೆ ನೀಡಿದ್ದಾರೆ.