ರಾಯಚೂರು: ಹಾಸ್ಟೆಲ್ ವಾರ್ಡನ್ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದ ಬಳಿ ಬುಧವಾರ ಈ ಘಟನೆ ನಡೆದಿದೆ. ವಾರ್ಡನ್ ಶರಣಪ್ಪ ಸಾಹುಕಾರ ಮೇಲೆ ಮಲ್ಲರಡ್ಡೆಪ್ಪ ದೊಡಮನಿ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣದ ವಿವರ:ಬುಧವಾರ ಹಿಂದುಳಿದ ವರ್ಗಗಳ ಅಧಿಕಾರಿ ರಮೇಶ ರಾಠೋಡ, ಬಾಲಕಿಯರ ವಸತಿ ನಿಲಯಕ್ಕೆ ಪರಿಶೀಲನೆಗೆ ತೆರಳಿದ್ದರು. ಈ ಸಮಯದಲ್ಲಿ ವಾರ್ಡನ್ ಶರಣಪ್ಪ ಸಾಹುಕಾರ ಸಹ ಜೊತೆಗೆ ಇದ್ದರು. ವಸತಿಯ ನಿಲಯ ಪರಿಶೀಲನೆ ನಡೆಸುತ್ತಿರುವಾಗ ಸ್ಥಳೀಯ ಮಲ್ಲರಡ್ಡೆಪ್ಪ ಎಂಬಾತ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ್ದ ವಾರ್ಡನ್ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರು ಪ್ರತಿದೂರು ದಾಖಲು:ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಇತ್ತ ಬಂಧಿತ ಆರೋಪಿ ಮಲ್ಲರಡ್ಡೆಪ್ಪ ಹಾಸ್ಟೆಲ್ ವಾರ್ಡನ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ವಾರ್ಡನ್ ಶರಣಪ್ಪ ಸಾಹುಕಾರ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಇನ್ನು ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿರುವುದನ್ನ ಖಂಡಿಸಿ ಸರ್ಕಾರಿ ನೌಕರರ ಸಂಘದ ನೌಕರರು ಇಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.