ರಾಯಚೂರು:ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಈ ಹಿನ್ನೆಲೆ ಇಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನ ಪಕ್ಷ ಘೋಷಣೆ ಮಾಡಿದೆ. ರಾಯಚೂರು ಗ್ರಾಮೀಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ರಾಯಚೂರು ಗ್ರಾಮೀಣ ಎಸ್ಟಿ ಮೀಸಲು ಕ್ಷೇತ್ರಕ್ಕೆ ಹಾಲಿ ಶಾಸಕ ಬಸವನಗೌಡ ದದ್ದಲ್ ಹಾಗೂ ಮಸ್ಕಿ ಕ್ಷೇತ್ರದ ಹಾಲಿ ಶಾಸಕ ಬಸವನಗೌಡ ತುರುವಿಹಾಳ್ರ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ.
ಎರಡು ಕ್ಷೇತ್ರಗಳ ಹಿಂದಿನ ಚುನಾವಣೆ ಫಲಿತಾಂಶ ಮತ್ತು ರಾಜಕೀಯ ಬೆಳವಣಿಗೆ:ಬಸವನಗೌಡ ದದ್ದಲ್ 2018ಕ್ಕೆ ಚುನಾವಣೆಗೆ ಪಾದಾರ್ಪಣೆ ಮಾಡಿದರು. ರಾಯಚೂರು ಗ್ರಾಮೀಣ ಕ್ಷೇತ್ರದಿಂದ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಕ್ಷೇತ್ರದಲ್ಲಿ ಅಂದು ಹಾಲಿ ಶಾಸಕರಾಗಿದ್ದ ತಿಪ್ಪರಾಜ್ ಹವಾಲ್ದಾರ್ ಹಾಗೂ ಪ್ರಥಮ ಬಾರಿಗೆ ಸ್ಪರ್ಧಿಸಿದ ಬಸವನಗೌಡ ದದ್ದಲ್ ನಡುವೆ ನೇರಹಣಾಹಣಿ ನಡೆದಿತ್ತು. ಈ ಚುನಾವಣೆಯಲ್ಲಿ ಬಸನಗೌಡ ದದ್ದಲ್ 66,656 ಮತಗಳನ್ನು ಪಡೆದರೇ, ತಿಪ್ಪುರಾಜು ಹವಾಲ್ದಾರ್ 56,692 ಮತಗಳನ್ನು ಪಡೆದಿಕೊಂಡಿದ್ದರು. ಅಂತಿಮವಾಗಿ ಬಸವನಗೌಡ ದದ್ದಲ್ 9,964 ಮತಗಳ ಅಂತರದೊಂದಿಗೆ ಮೊದಲ ಚುನಾವಣೆಯಲ್ಲೆ ಗೆಲುವಿನ ನಗೆ ಬೀರಿದ್ದರು.
ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಬಸವನಗೌಡ ದದ್ದಲ್ರಿಗೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆದಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ ಅದೇ ಪಕ್ಷದ ಬೇರೆ ಅಭ್ಯರ್ಥಿಗಳು ಟಿಕೆಟ್ಗಾಗಿ ಕಸರತ್ತು ನಡೆಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆ ಊಹಾಪೋಹಗಳಿಗೆ ತೆರೆಬಿದ್ದಿದೆ. ಈ ಮೂಲಕ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ದದ್ದಲ್ ಇಳಿಯಲಿದ್ದಾರೆ.