ರಾಯಚೂರು: ಕಾಂಗ್ರೆಸ್ ಮುಖಂಡ ಹಾಗೂ ಕುರುಬ ಸಮಾಜದ ಪ್ರಭಾವಿ ನಾಯಕರಾಗಿರುವ ಕೆ. ವಿರುಪಾಕ್ಷಪ್ಪ ಮನೆಗೆ ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಮುಖಂಡ ಕೆ.ವಿರುಪಾಕ್ಷಪ್ಪ ಮನೆಗೆ ಬಿ.ವೈ.ವಿಜಯೇಂದ್ರ ಭೇಟಿ ಜಿಲ್ಲೆಯ ಸಿಂಧನೂರಿನಲ್ಲಿರುವ ಕೆ.ವಿರುಪಾಕ್ಷಪ್ಪ ಮನೆಗೆ ಸಿಂಧನೂರಿಗೆ ಆಗಮಿಸಿದ ವೇಳೆ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಮುಂಬರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಬಿಜೆಪಿಗೆ ಆಹ್ವಾನಿಸಲು ಹಾಗೂ ಪ್ರತಾಪಗೌಡ ಪಾಟೀಲ್ ಅವರಿಗೆ ಬೆಂಬಲ ಸೂಚಿಸುಂತೆ ಕೊರಲು ಈ ಭೇಟಿ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಕೆ.ವಿರುಪಾಕ್ಷಪ್ಪ ಮಾಜಿ ಸಂಸದರಾಗಿದ್ದು, ಕುರುಬ ಸಮಾಜದ ಪ್ರಭಾವಿ ಮುಖಂಡರಾಗಿದ್ದಾರೆ. ಸಿಂಧನೂರು, ಮಸ್ಕಿ ಭಾಗದಲ್ಲಿ ಕುರುಬ ಸಮುದಾಯದ ಹಿಡಿತವಿದ್ದು, ಈ ಸಮಾಜದ ಮತಗಳನ್ನ ಸೆಳೆಯುವುದಕ್ಕೆ ಭೇಟಿ ನೀಡಿರಬಹುದೆಂಬ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಅಲ್ಲದೇ ಬಿ.ವೈ. ವಿಜಯೇಂದ್ರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಜಿ ಸಂಸದರ ಮನೆಗೆ ಭೇಟಿ ನೀಡಿರುವುದು ಬೈ ಎಲೆಕ್ಷನ್ ಗೆಲ್ಲುವ ರಣತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.
ಈ ಭೇಟಿ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಕೆ.ವಿರುಪಾಕ್ಷಪ್ಪ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷವನ್ನ ತೊರೆಯುವುದಿಲ್ಲ. ಬಿಜೆಪಿ ಸೇರುತ್ತಾರೆ ಎನ್ನುವ ವದಂತಿಗಳನ್ನ ಹಬ್ಬಿಸಿದ್ದಾರೆ. ಆದ್ರೆ ಅದೆಲ್ಲ ಸತ್ಯಕ್ಕೆ ದೂರವಾದ ಮಾತು. ಸದ್ಯ ಕುರುಬ ಸಮಾಜವನ್ನ ಪರಿಶಿಷ್ಟ ಪಂಗಡ(ಎಸ್ಟಿ) ಸೇರ್ಪಡೆ ಸಂಬಂಧ ನಡೆಯುತ್ತಿರುವ ಹೋರಾಟದಲ್ಲಿ ನಿರತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.