ಲಿಂಗಸುಗೂರು (ರಾಯಚೂರು):ಶಿಕ್ಷಕರ ದಿನಾಚರಣೆಯನ್ನು ಜಿಲ್ಲೆಯ ಲಿಂಗಸುಗೂರಿನಲ್ಲಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇತೃತ್ವದಲ್ಲಿ ಕರಾಳ ದಿನವಾಗಿ ಆಚರಿಸಿದ್ದು ಕಂಡು ಬಂತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಂಘಟಕರು, ಸರ್ಕಾರ ಅಗೌರವ ತೋರುತ್ತಿದ್ದರಿಂದ ಈ ಶುಭ ದಿನವನ್ನು ನಾವು ಕರಾಳ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಹರಡದಿರಲೆಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಶಾಲೆಗಳು ಆರಂಭಗೊಳ್ಳುವವರೆಗೆ ಕನಿಷ್ಠವೇತನ ಜಾರಿಗೊಳಿಸಬೇಕು. ಆದಷ್ಟು ಬೇಗನೆ ಮಾರ್ಗಸೂಚಿ ರಚಿಸಿ ಶಾಲೆಗಳನ್ನು ಅರಂಭಿಸಬೇಕು. ಸಂಕಷ್ಟಕ್ಕೆ ಸಿಲುಕಿದ ಸಂಸ್ಥೆಗಳಿಗೆ ಆರ್ಥಿಕ ನೆರವು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಪಡಿಸಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇತೃತ್ವದಲ್ಲಿ ಕರಾಳ ದಿನಾಚರಣೆ ಬಸ್ ನಿಲ್ದಾಣ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಅವರು, ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳ ಕುರಿತು ಧಿಕ್ಕಾರ ಹಾಕುತ್ತ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.