ಲಿಂಗಸುಗೂರು:ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬವನ್ನು ತಾಲೂಕಿನಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕೊರೊನಾ ವೈರಸ್ ಹರಡದಂತೆ ಸರ್ಕಾರ, ವಕ್ಫ್ ಬೋರ್ಡ್ ಸಮಿತಿ ನಿರ್ದೇಶನದಂತೆ ಈದ್ಗಾ ಮೈದಾನಗಳಲ್ಲಿ ಆಚರಿಸಬೇಕಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಕೇವಲ ಮಸೀದಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಇಡೀ ಮುಸ್ಲಿಂ ಸಮುದಾಯ ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದು ಕಂಡು ಬಂತು.
ಮಸೀದಿಗಳಲ್ಲಿ ಕೊರೊನಾ ನಿಯಮವನ್ನು ಪಾಲನೆ ಮಾಡಿ ಬೆಳಗಿನ ಜಾವವೆ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಮಸೀದಿಗಳಲ್ಲಿ ಗರಿಷ್ಠ 50 ಜನರಿಗೆ ಅವಕಾಶ ಕಲ್ಪಿಸಿ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲಾಗಿತ್ತು. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಲಾಯಿತು. ಬೆಳಗಿನ ಜಾವವೇ ಪ್ರಾರ್ಥನೆ ಸಲ್ಲಿಸಿ ವಿಶ್ವಕ್ಕೆ ವ್ಯಾಪಿಸಿದ ಕೊರೊನಾ ನಿರ್ಮೂಲನೆ ಆಗಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಈ ಕುರಿತು ಮುದಗಲ್ಲ ಮುಸ್ಲಿಂ ಮುಖಂಡ ನಯೀಮ್ ಮಾತನಾಡಿ, ವಿಶ್ವದಾದ್ಯಂತ ಹರಡಿದ ಕೊರೊನಾ ವೈರಸ್ ನಿರ್ಮೂಲನೆ ಆಗಬೇಕು. ದೇಶದ ಜನತೆ ಶಾಂತಿ, ಸೌಹಾರ್ದತೆಯಿಂದ ಬದುಕಲು ಅಲ್ಹಾ ಎಲ್ಲರಿಗೂ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾಗಿ ಈ ಟಿವಿ ಭಾರತ್ ಜೊತೆ ಅನಿಸಿಕೆ ಹಂಚಿಕೊಂಡರು.