ರಾಯಚೂರು:ಜಿಲ್ಲೆಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಪತ್ತೆ ಹಿನ್ನೆಲೆಯಲ್ಲಿ ಅಬಕಾರಿ ಪೊಲೀಸರಿಂದ ಮತ್ತಷ್ಟು ಶೋಧ ಕಾರ್ಯ ನಡೆದಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಚಾಕೊಲೇಟ್ ಜಪ್ತಿ ಮಾಡಿಕೊಳ್ಳಲಾಗಿದೆ. ರಾಯಚೂರು ನಗರ, ಇಂಡಸ್ಟ್ರಿಯಲ್ ಏರಿಯಾ, ಯರಮರಸ್, ಚಿಕ್ಕಸೂಗೂರು, ಯರಗೇರಾ ಸೇರಿದಂತೆ ಕಡೆಗಳಲ್ಲಿ ದಾಳಿ ನಡೆಸಿ ಇದರ ಕಿಂಗ್‌ಪಿನ್ ಸೇರಿದಂತೆ ಬುಧವಾರದಂದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಹಿಂದೆ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು.
ಕಿರಾಣಿ ಅಂಗಡಿ ಮತ್ತು ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದು, ಗಾಂಜಾ ಚಾಕೊಲೇಟ್ ಬಾಕ್ಸ್ ಪತ್ತೆಯಾಗಿದೆ. ಇದರ ಕಿಂಗ್‌ಪಿನ್ ಸಂದೀಪ್ ಹಾಗೂ ಇನ್ನಿಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ. 30, 40, 50, 60 ರೂಪಾಯಿವರೆಗೆ ಚಾಕೊಲೇಟ್ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದರ ಜಾಡು ಹಿಡಿದು ಅಬಕಾರಿ ದಾಳಿಯನ್ನು ಮುಂದುವರೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಲಕ್ಷ್ಮೀ ನಾಯಕ, ಈ ಪ್ರಕರಣ ಸಂಬಂಧಿಸಿದಂತೆ ಮೊದಲಿಗೆ ಇಬ್ಬರು ಹಾಗೂ ಬುಧುವಾರದಂದು ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಕಿಂಗ್‌ಪಿನ್ ಸಂದೀಪ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಅವರಲ್ಲಿದ್ದ ಚಾಕೊಲೇಟ್ ಜಪ್ತಿ ಮಾಡಿಕೊಂಡಿದ್ದೇವೆ. ಆರಂಭದಲ್ಲಿ ಬಂಧಿತರಿಂದ ವಿಚಾರಣೆ ನಡೆಸಿದ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ ಮಾಡಿದ ದಾಳಿ ನಿಜವಾಗಿದೆ.