ಮೈಸೂರು:ಅರಮನೆಯಲ್ಲಿ ನಡೆಯುತ್ತಿರುವ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಜವಂಶಸ್ಥ ಯದುವೀರ್ ಹೆಸರು ಹಾಕದೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಹಲವು ಗೊಂದಲಗಳಿದ್ದು, ಇದಕ್ಕೆ ಯದುವೀರ್ ಅವರ ಸೋದರ ಸಂಬಂಧಿ ಸ್ಪಷ್ಟನೆ ನೀಡಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್ ಹಮ್ಮಿಕೊಂಡಿರುವ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಇಂದು ದರ್ಬಾರ್ ಹಾಲ್ನಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಒಂದು ಸಾವಿರ ವಿಶೇಷ ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿದ್ದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ರಾಜವಂಶಸ್ಥ, ಹಾಲಿ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರನ್ನು ಮುದ್ರಿಸದೆ ಇರುವುದು ಸಾರ್ವಜನಿಕ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ಸಂಬಂಧ ಸ್ಪಷ್ಟನೆ ನೀಡಿದ ರಾಜವಂಶಸ್ಥ ಹಾಗೂ ಯದುವೀರ್ ಅವರ ಸೋದರ ಸಂಬಂಧಿ ವರ್ಚಸ್ ಸಿದ್ದಲಿಂಗರಾಜ ಅರಸ್, ಯಾವಾಗಲೂ ಮನೆಯಲ್ಲಿ ಯಾರು ದೊಡ್ಡವರೋ ಅವರ ಹೆಸರಿನಲ್ಲಿ ಆಹ್ವಾನ ಪತ್ರಿಕೆಯನ್ನು ಕೊಡಬೇಕು. ದಸರೆಗೆ ಕೊಡುವ ಕಾರ್ಡ್ನಲ್ಲೂ ಪ್ರಮೋದಾದೇವಿ ಒಡೆಯರ್ ಅವರ ಹೆಸರಿನಲ್ಲೇ ಎಲ್ಲರ ಮನೆಗೆ ಆಹ್ವಾನ ಪತ್ರಿಕೆ ಕೊಡಲಾಗುತ್ತದೆ. ಅದೇ ರೀತಿ ಹಿಂದಿನಿಂದಲೂ ತೆಗೆದುಕೊಂಡು ಬಂದಿರುವ ಪದ್ಧತಿ ಇದು. ಜಯಚಾಮರಾಜ ಒಡೆಯರ್ ಮಹಾರಾಜರಾದಾಗಲೂ ಅವರ ತಂದೆಯ ಹೆಸರಿನಲ್ಲೇ ಆಹ್ವಾನ ಪತ್ರಿಕೆ ಹೋಗುತ್ತಿತ್ತು.
ಅದೇ ರೀತಿ ಈ ಬಾರಿ ಪ್ರಮೋದಾದೇವಿ ಒಡೆಯರ್ ಹೆಸರಿನಲ್ಲಿ ಆಹ್ವಾನ ಪತ್ರಿಕೆ ಹೋಗಿದೆ. ಇದಕ್ಕೆ ಬೇರೆ ಅರ್ಥ ತೆಗೆದುಕೊಳ್ಳಬೇಡಿ. ಇದಕ್ಕೂ ಮುಂಚೆ ನನ್ನ ಸೋದರ ಮಾವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಲ್ಲಿ ಹೋಗುತ್ತಿತ್ತು. ಈಗ ನಮ್ಮ ಕುಟುಂಬಕ್ಕೆ ಸೋದರತ್ತೆ ಅವರೇ ಹಿರಿಯರು. ಆದ್ದರಿಂದ ಅವರ ಹೆಸರಿನಲ್ಲಿ ಈಗ ಆಹ್ವಾನ ಪತ್ರಿಕೆ ಹೋಗುತ್ತಿದೆ. ಬೇರೆ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.