ಕರ್ನಾಟಕ

karnataka

ETV Bharat / state

World Yoga Day: ಯೋಗ ನಗರಿ ಮೈಸೂರು ಅರಮನೆ ಆವರಣದಲ್ಲಿ ವಿಶ್ವಯೋಗ ದಿನದ ಆಚರಣೆ

ವಿಶ್ವ ಯೋಗ ದಿನಾಚರಣೆ ನಿಮಿತ್ತ ಇಂದು ಮೈಸೂರು ಅರಮನೆ ಮೈದಾನದಲ್ಲಿ ಸಾವಿರಾರು ಜನ ಯೋಗ ಪ್ರದರ್ಶನ ಮಾಡಿದರು.

ಅರಮನೆ ಆವರಣದಲ್ಲಿ ಯೋಗ ಪ್ರದರ್ಶನ
ಅರಮನೆ ಆವರಣದಲ್ಲಿ ಯೋಗ ಪ್ರದರ್ಶನ

By

Published : Jun 21, 2023, 10:04 AM IST

ಅರಮನೆ ಆವರಣದಲ್ಲಿ ಯೋಗ ದಿನಾಚರಣೆ

ಮೈಸೂರು: ವಿಶ್ವ ಯೋಗ ದಿನಾಚರಣೆ ನಿಮಿತ್ತ ಇಂದು ಅರಮನೆ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಮೈಸೂರು ಅರಮನೆ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಗೂ ವಿವಿಧ ಯೋಗ ನಿರತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್​ ಸಿಂಹ ಮಾತನಾಡಿ, ಯೋಗ ಮಾಡುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚುತ್ತದೆ ಎಂದು ಹೇಳಿದರು. 2015ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಜೂನ್ 21ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಮಂಡಿಸಿದರು. ಬಹುತೇಕ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದವು. ಅಂದಿನಿಂದ ವಿಶ್ವ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಮೈಸೂರನ್ನು ಸಿಟಿ ಆಫ್ ಯೋಗ ಎಂದು ಕರೆಯಲಾಗುತ್ತದೆ ಎಂದರು.

ಬಳಿಕ ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಮಾತನಾಡಿ, ನಾವು ಚಿಕ್ಕವರಿದ್ದಾಗ ಡಾ. ರಾಜಕುಮಾರ್ ಅವರು ಯೋಗ ಮಾಡುವುದನ್ನು ನೋಡುತ್ತಿದ್ದೆ. ಯೋಗ ಮಾಡುವುದರಿಂದ ದೇಹಕ್ಕೆ ತೇಜಸ್ಸು ನೀಡುತ್ತದೆ. ಯೋಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಉಲ್ಲಾಸದಿಂದ ಇರಲು ಸಹಕಾರಿಯಾಗುತ್ತದೆ. ದೇಶ ಕಾಯುವ ಸೈನಿಕರಿಗೂ ಯೋಗ ಮಾಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಮಾತನಾಡಿ, ಯೋಗ ವಿಶ್ವದಲ್ಲಿ ಪ್ರಸಿದ್ದಿ ಪಡೆದಿದೆ. ಯೋಗದ ಮಹತ್ವ ವಿಶ್ವಕ್ಕೆ ತಿಳಿದಿದೆ. ಮೈಸೂರು ಯೋಗಕ್ಕೆ ಪ್ರಸಿದ್ದಿ ಪಡೆದಿದೆ. ಯೋಗದಲ್ಲಿ ಮೈಸೂರು ಗಿನ್ನಿಸ್ ದಾಖಲೆ ಮಾಡಿತ್ತು. ಯೋಗ ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ. ಎಲ್ಲ ಯೋಗ ಸಂಘ ಸಂಸ್ಥೆಗಳು ಯೋಗ ಬೆಳೆಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಮತ್ತೊಮ್ಮೆ ಯೋಗದಲ್ಲಿ ಮೈಸೂರು ಗಿನ್ನೆಸ್​ ದಾಖಲೆ ಮಾಡಬೇಕು ಎಂದರು.

ಶ್ರೀ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಯೋಗ ಮನಸ್ಸನ್ನು ಹಿಡಿತದಲ್ಲಿ ಇಡುತ್ತದೆ. ವಿಶ್ವದ 186 ದೇಶಗಳಲ್ಲಿ ಯೋಗ ಸ್ಥಾನ ಪಡೆದಿದೆ. ಸನಾತನ ಋಷಿಗಳು ಯೋಗವನ್ನು ನೀಡಿದರು ಎಂದು ಮಾಹಿತಿ ನೀಡಿದರು. ಶಂಕ ನಾದವನ್ನು ಮೊಳಗಿಸುವ ಮೂಲಕ ಯೋಗವನ್ನು ಪ್ರಾರಂಭಿಸಲಾಯಿತು. ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು ಭಾಗವಹಿಸಿ ಯೋಗವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮುಖಂಡರಾದ ತನ್ವೀರ್ ಪಾಷಾ ಸೇರಿದಂತೆ ವಿವಿಧ ಧರ್ಮಗುರುಗಳು ಹಾಗೂ ಯೋಗಪಟುಗಳು ಭಾಗವಹಿಸಿದ್ದರು. ಇನ್ನು ಮೈಸೂರಿನಲ್ಲಿ ವಿವಿಧೆಡೆ ಇಂದು ಯೋಗ ದಿನಾಚರಣೆ ಆಚರಿಸಲಾಯಿತು.

ಇದನ್ನೂ ಓದಿ:Video: ಉಪರಾಷ್ಟ್ರಪತಿ ಧನಕರ್ ಸೇರಿ ಗಣ್ಯರಿಂದ ಯೋಗ ದಿನ ಆಚರಣೆ..

ABOUT THE AUTHOR

...view details