ಮೈಸೂರು: ಚಿರತೆ ಸಾಮಾನ್ಯವಾಗಿ ಕಾಡಿನಲ್ಲಿ ವಾಸ ಇರುವುದಿಲ್ಲ. ನಾಡಿನ ಕುರುಚಲು ಪ್ರದೇಶದಲ್ಲಿ ನಮ್ಮ ನಡುವೆಯೇ ಇರುವ ಪ್ರಾಣಿ ಆಗಿದ್ದು, ಸಾಮಾನ್ಯವಾಗಿ ಮನುಷ್ಯನ ಮೇಲೆ ಅಟ್ಯಾಕ್ ಮಾಡುವುದಿಲ್ಲ. ಆಕಸ್ಮಿಕವಾಗಿ ಒಂದೆರಡು ಘಟನೆಗಳು ನಡೆದಿರಬಹುದು ಎಂದು ನೆನ್ನೆ ಟಿ. ನರಸೀಪುರ ಬಳಿಯ ಗ್ರಾಮದಲ್ಲಿ ಯುವತಿಯ ಮೇಲೆ ಚಿರತೆ ದಾಳಿಯ ಬಗ್ಗೆ ಪ್ರಸ್ತಾವನೆ ಮಾಡಿ ವನ್ಯಜೀವಿ ತಜ್ಞರಾದ ಪ್ರೋ. ಮೇವಾಸಿಂಗ್ ಈಟಿವಿ ಭಾರತ್ ಜೊತೆ ಮಾತನಾಡಿದರು. ಅವರೊಂದಿಗಿನ ಸಂದರ್ಶನ ಹೀಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹಾಗೂ ವನ್ಯಜೀವಿ ತಜ್ಞರಾದ ಪ್ರೋ. ಮೇವಾಸಿಂಗ್ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಚಿರತೆಗಳು ನಾಡಿಗೆ ಬರುವುದು ಹೊಸದಲ್ಲ, ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಎಲ್ಲ ಕಡೆ ನಾಡಿಗೆ ಚಿರತೆಗಳು ಬರುತ್ತವೆ.
ಚಿರತೆಯ ಶೂಟ್ ಪರಿಹಾರ ಅಲ್ಲ: ಸಾಮಾನ್ಯವಾಗಿ ದಟ್ಟ ಕಾಡುಗಳಲ್ಲಿ ಚಿರತೆಗಳು ಇರುವುದಿಲ್ಲ. ಅವುಗಳು ಕುರುಚಲು ಗುಡ್ಡಗಾಡಿನ ಪ್ರದೇಶಗಳಲ್ಲಿ ವಾಸವಾಗಿರುತ್ತವೆ. ಹೆಚ್ಚಾಗಿ ಚಿರತೆಗಳು ಜನರಿಗೆ ತೊಂದರೆ ಕೊಡುವುದಿಲ್ಲ. ಚಿರತೆಗಳಿಗೆ ನಾಯಿಗಳು ಪ್ರಿಯವಾದ ಆಹಾರ. ನಾಯಿಗಳನ್ನು ಹಿಡಿಯಲು ಗ್ರಾಮದ ಕಡೆ ಬರುವುದು ಸಹಜ. ಇಂತ ಸಂದರ್ಭದಲ್ಲಿ ಸಾವಿರದಲ್ಲಿ ಒಂದೆರಡು ಘಟನೆಗಳು ಮನುಷ್ಯನ ಮೇಲೆ ದಾಳಿಯಾಗಿದೆ. ಅದನ್ನು ಬಿಟ್ಟರೆ ಚಿರತೆಗಳು ಮನುಷ್ಯನಿಗೆ ತೊಂದರೆ ಕೊಟ್ಟಿದ್ದು ಕಡಿಮೆ. ತೊಂದರೆ ಕೊಟ್ಟ ಚಿರತೆಯನ್ನು ಶೂಟ್ ಮಾಡುವುದು ಪರಿಹಾರ ಅಲ್ಲ ಎಂದರು.