ಮೈಸೂರು: ನಂಜನಗೂಡು ತಾಲೂಕಿನ ಕಪಿಲಾ ನದಿ ನೀರಿನ ಮಟ್ಟ ಕುಸಿಯುತ್ತಿರುವುದು ಗ್ರಾಮಸ್ಥರ ಅತಂಕಕ್ಕೆ ಕಾರಣವಾಗಿದೆ.
ಬೇಸಿಗೆ ಆರಂಭವಾಗಲು ಇನ್ನೂ ಎರಡು ತಿಂಗಳು ಬಾಕಿಯಿದೆ. ಆದರೆ ಫೆಬ್ರವರಿ ಮೊದಲ ವಾರದಲ್ಲಿಯೇ ಕಪಿಲಾ ಸೇತುವೆ ಬಳಿ ನೀರಿನ ಮಟ್ಟ ತಳಮಟ್ಟದಲ್ಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಾನುವಾರುಗಳ ಪೋಷಣೆ, ಕೃಷಿ ಹಾಗೂ ಕುಡಿಯಲು ನೀರಿಗೆ ಕೊರತೆಯಾಗಬಹುದು ಎಂಬ ಚಿಂತೆ ಗ್ರಾಮಸ್ಥರದ್ದಾಗಿದೆ.
ಕಪಿಲಾ ಸೇತುವೆಯಲ್ಲಿ ಕುಸಿಯುತ್ತಿರುವ ನೀರಿನ ಮಟ್ಟ.. ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಪಿಲಾ, ನುಗು ಹಾಗೂ ತಾರಕ ಜಲಾಶಯಗಳಿಂದ ನೀರನ್ನು ಬಿಡುವುದರಿಂದ ಕಪಿಲಾ ನದಿ ಮೈದುಂಬಿ ಹರಿಯುತ್ತದೆ. ಇದರಿಂದ ನಂಜನಗೂಡು ತಾಲೂಕಿನ ನೂರಾರು ಹಳ್ಳಿಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ಆದರೆ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಮಟ್ಟ ಕುಸಿದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಪ್ರವಾಹ ಸಂದರ್ಭದಲ್ಲಿ ಕಪಿಲಾ ಜಲಾಶಯನಿಂದ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ನಾಲೆಗಳಿಗೆ ನೀರು ಬಿಟ್ಟು ಕೆರೆಕಟ್ಟೆಗಳನ್ನು ತುಂಬಿಸಿಕೊಳ್ಳುವುದರಿಂದ ಬೇಸಿಗೆಯಲ್ಲಿ ನೀರಿನ ಅಭಾವ ಕಾಡುವುದಿಲ್ಲ. ಆದರೆ ಈಗಿನ ಬಿಸಿಲಿನ ತಾಪಮಾನ ನೋಡಿದರೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ, ಕೃಷಿಗೆ ಹಾಗೂ ಕುಡಿಯಲು ನೀರು ಸಿಗುವುದು ಕಷ್ಟವಾಗಬಹುದು.