ಮೈಸೂರು :ನನ್ನನ್ನು ರಾಜಕೀಯವಾಗಿ ಮುಗಿಸಿದ್ದೇ ಸಿಎಂ ಪುತ್ರ ವಿಜಯೇಂದ್ರ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿರುವುದು ಕೂಡ ಅದೇ ವಿಜಯೇಂದ್ರ. ಜೊತೆಗೆ ಜಾರಕಿಹೊಳಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರವಿದೆ ಎಂಬ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನೀಡಿದ್ದು, ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿದೆ.
ಇಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೌಪ್ಯ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್. ವಿಶ್ವನಾಥ್, ಯಡಿಯೂರಪ್ಪ ಅವರನ್ನು ಈ ಹಿಂದೆ ನಕಲಿ ಸಹಿ ಮಾಡಿ ಜೈಲಿಗೆ ಕಳುಹಿಸಿದ್ದೇ ಪುತ್ರ ವಿಜಯೇಂದ್ರ. ಈಗ ಇಡೀ ಕುಟುಂಬವನ್ನೆ ಜೈಲಿಗೆ ಕಳುಹಿಸುತ್ತಾನೆ ಎಂದರು.
ಸಿಡಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ :ವಿಜಯೇಂದ್ರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಎಲ್ಲಾ ಹಿಂದುಳಿದ ನಾಯಕರನ್ನು ಮುಗಿಸಲು ಹೊರಟಿದ್ದಾನೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದೇ ವಿಜಯೇಂದ್ರ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿದ್ದಾನೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ. ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ಎಂಬುದನ್ನು ನೋಡೊಣ. ಆದ್ದರಿಂದ ಈಗ ಸಿಎಂ ಬದಲಾವಣೆ ಆಗಬೇಕು. ಈ ರಾಜಕಾರಣ ಕೊನೆಯಾಗಬೇಕು ಎಂದು ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.