ಮೈಸೂರು:ಕುವೆಂಪು ನಗರದಲ್ಲಿರುವ ಮಾಜಿ ಸ್ಪೀಕರ್ ಕೃಷ್ಣ ಅವರ ನಿವಾಸಕ್ಕೆ ಅನರ್ಹ ಶಾಸಕ ನಾರಾಯಣಗೌಡ ಶುಕ್ರವಾರ ರಾತ್ರಿ ಭೇಟಿ ನೀಡಿದ್ದಾರೆ.
ಮಾಜಿ ಸ್ಪೀಕರ್ ಕೃಷ್ಣ ಆಶೀರ್ವಾದ ಪಡೆದ ಅನರ್ಹ ಶಾಸಕ ನಾರಾಯಣಗೌಡ
ಕುವೆಂಪು ನಗರದಲ್ಲಿರುವ ಮಾಜಿ ಸ್ಪೀಕರ್ ಕೃಷ್ಣ ಅವರ ನಿವಾಸಕ್ಕೆ ಅನರ್ಹ ಶಾಸಕ ನಾರಾಯಣಗೌಡ ಶುಕ್ರವಾರ ರಾತ್ರಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದು, ಕೆ.ಆರ್.ಪೇಟೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಚುನಾವಣೆಯಲ್ಲಿ ಗೆದ್ದು ಬಂದು ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವಂತೆ ನಾರಾಯಣಗೌಡರಿಗೆ ಕೃಷ್ಣ ಹರಸಿದರು. ಇನ್ನೂ ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮೂರು ಅವಧಿಗೆ ಶಾಸಕರಾಗಿ, ಸಂಸದರಾಗಿ, ರೇಷ್ಮೆ ಮತ್ತು ಪಶುಸಂಗೋಪನೆ ಖಾತೆಯ ಸಚಿವರಾಗಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಂಪುಟದಲ್ಲಿ ಕೆಲಸ ಮಾಡಿರುವ ಕೃಷ್ಣ, ಸರಳ ಸಜ್ಜನ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದು ಇಂದಿಗೂ ತಾಲೂಕಿನಲ್ಲಿ ತಮ್ಮದೇ ಆದ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿರುವ ನಾರಾಯಣಗೌಡರಿಗೆ ಅವರು ಆಶೀರ್ವಾದಿಸಿದರು.
ಅನರ್ಹ ಶಾಸಕ ನಾರಾಯಣಗೌಡ, ಕೃಷ್ಣ ಅವರ ಆಶೀರ್ವಾದ ಪಡೆದುಕೊಂಡಿರುವುದು ಕೆ.ಆರ್.ಪೇಟೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇನ್ನು ಈ ಸಂದರ್ಭದಲ್ಲಿ ಯುವಮುಖಂಡ ಸಂತೇಬಾಚಹಳ್ಳಿ ನಾಗರಾಜು ಉಪಸ್ಥಿತರಿದ್ದರು.