ಮೈಸೂರು:ಕೇಂದ್ರ ಸಚಿವರನ್ನು ಭೇಟಿ ಮಾಡಲು ನಾನು ಹಾಗೂ ಸಚಿವ ಕೃಷ್ಣ ಭೈರೇಗೌಡರು ಸಮಯ ಕೇಳಿದ್ದೇವೆ. ಆದರೆ ಕೇಂದ್ರ ಸಚಿವರು ಸಮಯ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿಯೂ ಭೇಟಿಗೆ ಸಮಯ ನಿಗದಿ ಮಾಡಿಲ್ಲ. ಆದರೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ದೂರಿದರು.
ಶುಕ್ರವಾರ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ರೈತ ದಸರಾಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೈಸೂರು ದಸರಾ ಪ್ರಪಂಚದಲ್ಲೇ ವಿಶಿಷ್ಟವಾಗಿದೆ. ಶತ ಶತಮಾನಗಳಿಂದಲೂ ರಾಜ ಮನೆತನದವರು ಸಾಂಪ್ರದಾಯಿಕವಾಗಿ ದಸರಾ ನಡೆಸಿಕೊಂಡು ಬರುತ್ತಿದ್ದಾರೆ. ಈ ವೈಭವ ನೋಡಲು ದೇಶ-ವಿದೇಶಗಳಿಂದಲೂ ಜನರು ಈಗಲೂ ಬರುತ್ತಿದ್ದಾರೆ. ದಸರಾದ ಅಂಗವಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇದ್ದು ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸರ್ಕಾರ ಏನೆಲ್ಲ ಮಾಡಬೇಕೋ ಅದನ್ನೆಲ್ಲಾ ಮಾಡುತ್ತದೆ. ನಿನ್ನೆಯಷ್ಟೇ ಮತ್ತೆ 21 ತಾಲೂಕುಗಳನ್ನು ಸರ್ಕಾರ ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು ಕೇಂದ್ರದ ಕೃಷಿ ಸಚಿವರನ್ನು ಭೇಟಿಗಾಗಿ ನಾನು ಮತ್ತು ಸಚಿವ ಕೃಷ್ಣ ಬೈರೇಗೌಡರು ಪ್ರಯತ್ನ ಮಾಡುತ್ತೇವೆ. ಅವರ ರಿಪ್ಲೈ ನೋಡಿ ಮುಂದೆ ನಾವೇನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು. ಇನ್ನು, ಡಿ.ಕೆ.ಶಿವಕುಮಾರ್ ಅರ್ಜಿ ವಿಚಾರದಲ್ಲಿ ಅವರು ಕಾನೂನಾತ್ಮಕವಾಗಿ ಮುಂದುವರಿಯುತ್ತಾರೆ ಎಂದು ಹೇಳಿದರು.