ಈ ಬಾರಿ ಕೇಂದ್ರದ ಬಜೆಟ್ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್ ವಿಶ್ವನಾಥ್
2023ರ ಕೇಂದ್ರ ಬಜೆಟ್ದಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಡೆಗಣನೆ - ಇದೊಂದು ಉಳ್ಳವರ ಪರ ಬಜೆಟ್ - ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪ.
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್
By
Published : Feb 4, 2023, 4:31 PM IST
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್
ಮೈಸೂರು : ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಅಕ್ಷರ, ಅನ್ನ, ಆರೋಗ್ಯ ಕ್ಷೇತ್ರವನ್ನು ಕಡೆಗಣನೆ ಮಾಡಲಾಗಿದೆ. ಅದರೊಂದಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ತಮ್ಮ ಪಕ್ಷದ ಬಜೆಟ್ ಅನ್ನೇ ಟೀಕಿಸಿದರು. ಮೈಸೂರಿನ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಅಕ್ಷರ, ಆರೋಗ್ಯ , ಅನ್ನ ನೀಡುವ ಕ್ಷೇತ್ರಗಳನ್ನೂ ಕಡೆಗಣಿಸಿದೆ. ಈ ಮೂರು ಕ್ಷೇತ್ರ ದೇಶದ ಅಭಿವೃದ್ಧಿಗೆ ಅವಶ್ಯಕವಾಗಿದೆ. ಈ ಕಡೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕಿತ್ತು. ಆದರೆ ಈ ಕ್ಷೇತ್ರಗಳನ್ನು ಕಡೆಗಣನೆ ಮಾಡಿರುವುದು ಸರಿಯಲ್ಲ.
ಇದರ ಜೊತೆಗೆ ವಿವಿಧ ಇಲಾಖೆಗಳಿಗೆ ನೀಡಿರುವ ಅನುದಾನವನ್ನು ಈ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆ. ಇದರ ಜೊತೆಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಈ ಬಜೆಟ್ನಲ್ಲಿ ನಿರ್ಲಕ್ಷ್ಯ ಮಾಡಿದ್ದು. ಇದೊಂದು ಉಳ್ಳವರ ಪರ ಬಜೆಟ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವುದು ಸರಿಯಲ್ಲ: ಭದ್ರಾವತಿಯಲ್ಲಿರುವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಲಾಭದಲ್ಲಿದ್ದರೂ, ಈ ಸರ್ಕಾರ ಅದನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಆ ಭಾಗದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ, ಆ ಭಾಗದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ. ಕರ್ನಾಟಕದ ಎಲ್ಲ ಅಸ್ತಿಗಳನ್ನ ಮೋದಿ ಮತ್ತು ಅಮಿತ್ ಶಾ ಸೇರಿಕೊಂಡು ಗುಜರಾತಿನ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಭದ್ರಾವತಿಯಲ್ಲಿ ಬಿಜೆಪಿ ಒಂದು ಸಾರಿಯೂ ಗೆದ್ದಿಲ್ಲ: ಭದ್ರಾವತಿ ವಿಧಾನ ಸಭೆಯಲ್ಲಿ ಇಲ್ಲಿಯವರೆಗೆ ಬಿಜೆಪಿ ಒಂದು ಸಾರಿಯು ಗೆದ್ದಿಲ್ಲ. ಆದ್ದರಿಂದ ಬಿಜೆಪಿಗೆ ಭದ್ರಾವತಿ ಕಂಡರೆ ಆಗುವುದಿಲ್ಲ. ಅಮಿತ್ ಶಾ ಮತ್ತು ಮೋದಿ ಶಿವಮೊಗ್ಗಕ್ಕೆ ಬಂದಾಗ ಅಲ್ಲಿನ ಜನರು ಇದನ್ನು ಪ್ರಶ್ನೆ ಮಾಡಬೇಕು. ರಾಜ್ಯದಿಂದ ಗೆದ್ದು ಹೋಗಿರುವ 25 ಜನ ಸಂಸದರು ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ವಿಶ್ವನಾಥ್ ಒತ್ತಾಯಿಸಿದರು.
ಸಿ ಡಿ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಶ್ವನಾಥ್: ಸಿಡಿವಿಚಾರ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ವಿಶ್ವನಾಥ್, ರಮೇಶ್ ಜಾರಕಿಹೊಳಿ ಈ ವಿಚಾರವನ್ನೂ ಸಾರ್ವಜನಿಕವಾಗಿ ಚರ್ಚೆ ಮಾಡುತ್ತಿರುವುದು ಸರಿಯಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಬದುಕು ಇರುತ್ತದೆ. ಅದನ್ನೂ ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಬದುಕು ಇರುತ್ತದೆ. ಸಿಡಿ ವಿಚಾರವನ್ನೂ ಸಾರ್ವಜನಿಕವಾಗಿ ಚರ್ಚೆ ಮಾಡಬಾರದು. ಈಗಾಗಲೇ ರಾಜಕಾರಣಿಗಳ ಬಗ್ಗೆ ಜನರಿಗೆ ಬೇಸರ ಇದೆ ಎಂದು ಹಳ್ಳಿ ಹಕ್ಕಿ ಹೇಳಿದರು.
ಕಾಂಗ್ರೆಸ್ ತಾಯಿ ಎಂದ ವಿಶ್ವನಾಥ:ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನನಗೆ ತಾಯಿ ಇದ್ದ ಹಾಗೆ, ಎಲ್ಲ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ. ನಾನು ಪಕ್ಷ ಬದಲಾವಣೆ ಮಾಡಿದರೂ ನನ್ನ ಸಿದ್ಧಾಂತ ಒಂದೇ ಎನ್ನುವ ಮೂಲಕ ವಿಶ್ವನಾಥ್ ಅವರು ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದರು.