ಮೈಸೂರು: ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ, 1 ಹಸು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್ ಡಿ ಕೋಟೆ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಇಂದು ನಡೆದಿದೆ.
ಹೊಸಹೊಳಲು ಗ್ರಾಮದ ಎಚ್. ಎಸ್ ಲಿಂಗರಾಜು ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ಹಸುಗಳನ್ನು ಲಿಂಗರಾಜು ಅವರ ಪುತ್ರ ವಿಕಾಸ್ ಮೇಯಿಸುವ ವೇಳೆ ಹುಲಿ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಕರುವಿನ ಮೇಲೆ ಚಿರತೆ ದಾಳಿ:ಇನ್ನೊಂದೆಡೆಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದು ತಿಂದು ಹಾಕಿರುವ ಘಟನೆ ತಾಲೂಕಿನ ಮಾದಾಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಭಿಷೇಕ್ ಗೌಡ ಎಂಬುವವರಿಗೆ ಸೇರಿದ ಹಸುವಿನ ಕರುವನ್ನ ತಡರಾತ್ರಿ ಚಿರತೆ ತಿಂದು ಹಾಕಿದೆ.
ಪ್ರತಿನಿತ್ಯ ಕೊಟ್ಟಿಗೆಯಲ್ಲಿ ಹಸು ಮತ್ತು ಕರುವನ್ನು ಕಟ್ಟಿ ಹಾಕಲಾಗುತ್ತಿತ್ತು. ಚಿರತೆ ರಾತ್ರಿ ವೇಳೆ ದಾಳಿ ಮಾಡಿ ಕರುವನ್ನ ಅನತಿ ದೂರ ಎಳೆದೊಯ್ದು ಅರ್ಧ ಭಾಗ ತಿಂದು ಹಾಕಿದೆ. ಚಿರತೆ ದಾಳಿ ಮಾಡಿರುವ ಬೆನ್ನಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜಮೀನಿಗೆ ತೆರಳಲು ರೈತರು ಆತಂಕ ಪಡುತ್ತಿದ್ದಾರೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.