ಮೈಸೂರು: ಹುಲಿ ದಾಳಿಯಿಂದ ಕೂಲಿ ಕಾರ್ಮಿಕ ಗಾಯಗೊಂಡಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಮೇಟೆಕುಪ್ಪೆ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹಿರೇಹಳ್ಳಿ ಎ ಕಾಲೋನಿಯ ಮುನೇಶ್ವರ (27) ಗಾಯಗೊಂಡವರು ಎಂದು ತಿಳಿದುಬಂದಿದೆ. ಬಾಳೆಗೊನೆ ಕತ್ತರಿಸಲು ಕೇರಳಿಗರ ಜಮೀನಿಗೆ ಕೂಲಿ ಕೆಲಸಕ್ಕೆ 3 ಮಂದಿ ಕಾರ್ಮಿಕರು ಹೋಗಿದ್ದಾಗ ಪೊದೆಯಿಂದ ಹೊರಬಂದ ಹುಲಿ ದಾಳಿ ನಡೆಸಿದೆ. ಗಾಬರಿಯಿಂದ ಕಾರ್ಮಿಕರು ಚೀರಾಡುತ್ತಿದ್ದಂತೆಯೇ ಹುಲಿ ಕಾಲ್ಕಿತ್ತಿದೆ. ಮುನೇಶ್ವರ ಅವರ ಬಲಭಾಗದ ಕೈ ಬೆರಳುಗಳು ಸೀಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೀದಿನಾಯಿಗಳ ದಾಳಿಗೆ ಹಸು-ಕರು ಬಲಿ:ಜಿಲ್ಲೆಯಲ್ಲಿ ಪ್ರತಿನಿತ್ಯ ಚಿರತೆ, ಹುಲಿ ಹಾಗೂ ಆನೆ ದಾಳಿಗೆ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಬಲಿ ಎಂಬ ಸುದ್ದಿ ಕೇಳುತ್ತಿದ್ದೇವೆ. ಆದರೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಆರಂಭದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಶಂಕಿಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬೀದಿ ನಾಯಿಗಳ ದಾಳಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್ ಬಳಿ (ಭಾನುವಾರ) ಮುಂಜಾನೆ 4 ಗಂಟೆಯ ಸಮಯದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಕರು ಸಾವನ್ನಪ್ಪಿತ್ತು. ವಿಚಾರ ತಿಳಿದ ಜನರು ಚಿರತೆ ದಾಳಿ ಮಾಡಿ ಕರುವನ್ನು ಕೊಂದಿದೆ ಎಂದು ಶಂಕಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕರು ಸತ್ತಿದ್ದ ಸ್ಥಳ ಹಾಗೂ ರಸ್ತೆಯ ಮೇಲ್ಭಾಗದಿಂದ ಕರುವನ್ನು ಎಳೆದುಕೊಂಡು ಹೋಗಿದ್ದ ಸ್ಥಳ ಪರಿಶೀಲನೆ ನಡೆಸಿದ್ದಾರೆ.