ಮೈಸೂರು: ಟಾಂಗಾವಾಲರ ಬದುಕು ಲಾಕ್ಡೌನ್ನಿಂದ ಅಕ್ಷರಶಃ ಬೀದಿಗೆ ಬಿದ್ದಿದ್ದು, ಕುದುರೆಗಳಿಗೆ ಮೇವು ಹಾಕಲು ಹಣವಿಲ್ಲದ ಪರಿಸ್ಥಿಯಲ್ಲಿ ಟಾಂಗಾವಾಲರು ಇದ್ದಾರೆ.
ಪಾರಂಪರಿಕ ನಗರಿ ಮೈಸೂರಿನಲ್ಲಿ ರಾಜಪರಂಪರೆಯ ಪ್ರತೀಕವಾಗಿ ಇಂದಿಗೂ ಸಹ ಟಾಂಗಾ ಸವಾರಿ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ. ಪ್ರವಾಸಿಗರನ್ನೇ ನಂಬಿ ಬದುಕುವ ಈ ಟಾಂಗಾ ಗಾಡಿಗಳು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಲಾಕ್ಡೌನ್ ಪರಿಣಾಮ ಪ್ರವಾಸಿಗರು ಬಾರದ ಹಿನ್ನೆಲೆಯಲ್ಲಿ ದುಡಿಮೆ ಇಲ್ಲ, ಕುದುರೆಗೆ ಹುಲ್ಲು ಸಹ ಇಲ್ಲ, ನಮಗೂ ಊಟ ಇಲ್ಲ. ಮೈಸೂರು ನಗರದಲ್ಲಿ 50ಕ್ಕೂ ಹೆಚ್ಚು ಟಾಂಗಾ ಗಾಡಿಗಳಿದ್ದು, ಸಾಮನ್ಯ ಕುದುರೆಗೆ ಪ್ರತಿದಿನ 50ರಿಂದ 100 ರೂಪಾಯಿ ಹಣ ಬೇಕು. ವಿಶೇಷ ಕುದುರೆಗೆ 300 ರೂ. ಬೇಕು. ಈಗ ಬಾಡಿಗೆ ಇಲ್ಲದೇ ಕುದುರೆಗಳನ್ನು ಸಾಕಲು ಕಷ್ಟವಾಗುತ್ತಿದ್ದು, ಸರ್ಕಾರ ಅಥವಾ ದಾನಿಗಳು ಸಹಾಯ ನೀಡಬೇಕೆಂದು ಟಾಂಗಾವಾಲ ಅಕ್ರಮ್ ಪಾಷ ಮನವಿ ಮಾಡಿದ್ದಾರೆ.
60 ವರ್ಷಗಳಿಂದಲೂ ಟಾಂಗಾ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಮಹಮ್ಮದ್ ರೋಶಿ, ಮೈಸೂರು ಟಾಂಗಾ ಪ್ರಪಂಚದಲ್ಲೇ ಪ್ರಸಿದ್ಧಿ. ಪ್ರವಾಸಿಗರನ್ನು ನಂಬಿ ಬದುಕು ನಡೆಸುತ್ತಿದ್ದೆವು. ಹಿಂದೆ ಚೆನ್ನಾಗಿ ನಡೆಯುತ್ತಿತ್ತು. ಈಗ ಲಾಕ್ಡೌನ್ನಿಂದ ಕುದುರೆಗಳಿಗೆ ಮೇವಿಲ್ಲ. ನಮಗೂ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.