ಮೈಸೂರು :ಶುಭ ವೃಶ್ಚಿಕ ಲಗ್ನದಲ್ಲಿ ತಲಕಾಡಿನ ಪಂಚಲಿಂಗ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿದರು.
ಪೂಜಾ ಕೈಂಕರ್ಯಗಳು :ಏಕಾದಶವಾರ ಆಚರಣೆ,ರುದ್ರಾಭಿಷೇಕ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಮೊಸರು, ಎಳನೀರು, ಭಸ್ಮೋದಿಕೆ, ಗಂಧ, ರುದ್ರೋದಕ, ಸುವರ್ಣ, ಅಕ್ಷತೋದಿಕೆ ಸೇರಿದಂತೆ ವೈದ್ಯನಾಥೇಶ್ವರನಿಗೆ 11 ರೀತಿಯ ಅಭಿಷೇಕಗಳನ್ನು ನೆರವೇರಿಸಲಾಯಿತು.
ಋಗ್ವೇದ, ಯಜುರ್ವೇದ, ಸಾಮವೇದಗಳ ಸಹಿತ ಶ್ರೀಸೂಕ್ತ, ದುರ್ಗಾ ಸೂಕ್ತ, ರುದ್ರಾ, ಚಮೆ ಸೇರಿದಂತೆ ವಿವಿಧ ಮಂತ್ರಘೋಷಗಳ ಪಠಣ ಮಾಡಲಾಯಿತು. ಈ ಮೂಲಕ ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವರುಗಳಿಗೆ ಏಕ ಕಾಲದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ಸಿಎಂ ಬಿಎಸ್ವೈ ಗೈರು :ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗ್ಗೆ 4:30ರ ವೇಳೆಗೆ ಪುಣ್ಯಸ್ನಾನ ಮಾಡಿ ಪಂಚಲಿಂಗ ದರ್ಶನಕ್ಕೆ ಚಾಲನೆ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ವೈದ್ಯನಾಥೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಚಲಿಂಗ ದರ್ಶನಕ್ಕೆ ಚಾಲನೆ ನೀಡಿದ್ರು. ಇದೇ ವೇಳೆ ನಾಡಿನ ಜನರಿಗೆ ಒಳ್ಳೆಯದಾಗಲಿ, ಕೊರೊನಾ ಮಹಾಮಾರಿಯಿಂದ ನಾಡು ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.