ಮೈಸೂರು:ಹತ್ತೂರಲ್ಲಿ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರೆಗೆ ಇನ್ನೊಂದು ದಿನ ಬಾಕಿ ಇದ್ದು, ಶ್ರೀ ಶಿವರಾತ್ರೇಶ್ವರರ ಗದ್ದಿಗೆಗೆ ಪೂಜೆ ಹಾಗೂ ದಾಸೋಹ ಭವನದಲ್ಲಿ ಪೂಜೆ ಮಾಡುವ ಮುಖಾಂತರ ಸುತ್ತೂರು ಶ್ರೀಗಳು ದಾಸೋಹಕ್ಕೆ ಚಾಲನೆ ನೀಡಿದರು. ನಾಳೆಯಿಂದ (ಜ.18) 23ರ ವರೆಗೆ ಅದ್ಧೂರಿಯಾಗಿ ಸುತ್ತೂರು ಜಾತ್ರೆ ನಡೆಯಲಿದ್ದು, ಹೊಸಮಠದ ಚಿದಾನಂದಸ್ವಾಮಿ ಹಾಗೂ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡುವರು. ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜ ಸೇವಕರು, ಕೊಡುಗೈ ದಾನಿಗಳು, ವಿಜ್ಞಾನಿಗಳು, ಸಂಶೋಧಕರು ಹೀಗೆ ಎಲ್ಲ ಸ್ತರದ ಜನರು ಭಾಗವಹಿಸಲಿದ್ದಾರೆ.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದೊಂದಿಗೆ ನಾಳೆ ಸಂಜೆ 4ಕ್ಕೆ ವಸ್ತು ಪ್ರದರ್ಶನ, ಕೃಷಿ, ಸಿರಿಧಾನ್ಯ ಮತ್ತು ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಂಗೋಲಿ, ಸೋಬಾನೆ ಪದ, ದೋಣಿ ವಿಹಾರಗಳ ಉದ್ಘಾಟನೆ ನಡೆಯಲಿದೆ. ಜ.19ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 20ರಂದು ರಥೋತ್ಸವ, 21ರಂದು ಶ್ರೀ ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷ ದೀಪೋತ್ಸವ, 22 ರಂದು ತೆಪ್ಪೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.
ನಿತ್ಯ ಎರಡು ಲಕ್ಷ ಮಂದಿಗೆ ದಾಸೋಹ: ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಿತ್ಯ ಎರಡೂವರೆ ಲಕ್ಷ ಮಂದಿಗೆ ದಿನದಲ್ಲಿ ಮೂರು ಬಾರಿ ಅನ್ನ ದಾಸೋಹವಿರಲಿದೆ. ಇದಕ್ಕಾಗಿ ಈಗಾಗಲೇ ಎರಡು ವರ್ಷ ಹಳೆಯ ಸಾವಿರ ಕ್ವಿಂಟಾಲ್ ಅಕ್ಕಿ ದಾಸ್ತಾನು ಮಾಡಲಾಗಿದೆ. 200 ಕ್ವಿಂಟಾಲ್ ಬೇಳೆ, 20 ರಿಂದ 25 ಕ್ವಿಂಟಾಲ್ ಬೆಲ್ಲ, 1,500 ಟಿನ್ ಎಣ್ಣೆ ಮೊದಲಾದವನ್ನು ದಾಸ್ತಾನು ಮಾಡಲಾಗಿದೆ. ಕರ್ನಾಟಕ ಮತ್ತು ಹೊರ ರಾಜ್ಯದಿಂದ 20 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಒಂದು ಸಾವಿರ ಅಡುಗೆ ಬಾಣಸಿಗರು ಹಾಗೂ ಅಡುಗೆ ಬಡಿಸಲು 5000 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
ಸಾಮೂಹಿಕ ವಿವಾಹ ಮಹೋತ್ಸವ:ಜ.19ರಂದು ಸಾಮೂಹಿಕ ವಿವಾಹ ಮಹೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎ.ರಾಮದಾಸ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವುಪ್ಪು ಈಶ್ವರ್‌ರಾವ್, ತಿರುಮಲೈ ತಂಬು ಹಾಗೂ ಭಾರತೀ ರೆಡ್ಡಿ ಭಾಗವಹಿಸಲಿದ್ದಾರೆ. ಜ. 20ರಂದು ರಥೋತ್ಸವಕ್ಕೆ ಕೇಂದ್ರ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಷಿ ಚಾಲನ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ದೇಶಿ ಆಟಗಳು ಮತ್ತು ಚಿತ್ರಕಲಾ ಸ್ಪರ್ಧೆಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ಸಿಗಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ದಿನೇಶ್ ಗುಂಡೂರಾವ್ ಜತೆಗಿರುವರು.