ಮೈಸೂರು: ಮಾಜಿ ಸಚಿವ ಆರಗ ಜ್ಞಾನೇಂದ್ರ ಎಲ್ಲೇ ಹೋದರೂ ಅವರ ವಿರುದ್ಧ ಕಪ್ಪು ಮಸಿ ಬಳಿಯುವ ಚಳವಳಿಯನ್ನು ರಾಜ್ಯಾದ್ಯಂತ ಮಾಡಲಾಗುವುದು ಎಂದು ಕಾಂಗ್ರೆಸ್‌ನ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿಂದು ಮಾತನಾಡಿದ ಅವರು, ಹಿರಿಯ ರಾಜಕೀಯ ಮುತ್ಸದ್ಧಿ, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಗುರವಾಗಿ ಮಾತನಾಡಿದ್ದಾರೆ. ಆರಗ ಜ್ಞಾನೇಂದ್ರ ಕಂಡಲ್ಲಿ ರಾಜ್ಯದ ಉದ್ದಗಲಕ್ಕೂ ಕಪ್ಪು ಮಸಿ ಬಳಿಯುವ ಚಳವಳಿಗೆ ಮೈಸೂರಿನಿಂದಲೇ ವಿದ್ಯುಕ್ತ ಚಾಲನೆ ನೀಡಲಿದ್ದೇವೆ ಎಂದರು.
ವಿವಿಧತೆಯಲ್ಲಿ ಏಕತೆ ಇರುವ ಪ್ರಪಂಚದ ಶಕ್ತಿಶಾಲಿ ಪ್ರಜಾತಂತ್ರ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಬ್ರಿಟಿಷ್ ಸಾಮ್ರಾಜ್ಯದ ಆಡಳಿತಶಾಹಿ ವರ್ಗ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಕಪ್ಪುವರ್ಣೀಯರನ್ನು ವಿರೋಧಿಸಿದ್ದು ಹಾಗೂ ದ್ವೇಷಿಸಿದ್ದು ಜಗತ್ತಿಗೆ ಗೊತ್ತೇ ಇದೆ. ಅದೇ ಮನಸ್ಥಿತಿಯ ವಂಶವಾಹಿನಿಗಳು ಇನ್ನೂ ಭಾರತದಲ್ಲಿ ಜೀವಂತವಾಗಿವೆ ಎಂಬುದಕ್ಕೆ ಆರಗ ಜ್ಞಾನೇಂದ್ರ ಅವರೇ ಸಾಕ್ಷಿ ಎಂದು ಕಿಡಿಕಾರಿದರು.
ಮತೀಯವಾದ ಹಾಗೂ ವರ್ಣಭೇದ ನೀತಿಯನ್ನು ಆರಾಧಿಸುವ ಹಾಗೂ ಹಾಗೂ ಪೋಷಿಸುವ ರಾಜಕೀಯ ಪಕ್ಷಗಳ, ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಬಿಜೆಪಿಯ ಅಂತರ್ಯದಲ್ಲಿರುವ ಇಂಥ ಹೇಳಿಕೆಗಳೇ ವೈಜ್ಞಾನಿಕವಾದ ಸತ್ಯ. ಆರಗ ಜ್ಞಾನೇಂದ್ರ ಅವರು ತಮ್ಮ ಹೇಳಿಕೆಗಳ ಮೂಲಕ, ಉತ್ತರ ಕರ್ನಾಟಕ ಜನರಿಗೆ ಅವಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಉನ್ನತ ಸ್ಥಾನದಲ್ಲಿದ್ದು, ಯಾವ ರೀತಿ ಮಾತನಾಡಬೇಕು ಎನ್ನುವುದು ಕಲಿಯಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.