ಮೈಸೂರು : ಆಪರೇಷನ್ ಕಮಲದ ನಂತರ ಒಳ್ಳೆಯ ಸರ್ಕಾರ ನೀಡಲಿಲ್ಲ. ಪಕ್ಷದೊಳಗೆ ಹಲವಾರು ವಿರೋಧಗಳು ತುಂಬಿ ಹೋಗಿದ್ದವು. ಒಳ್ಳೆಯ ನಾಯಕತ್ವ ಕೂಡ ಒಳ್ಳೆಯ ಆಡಳಿತ ನೀಡಲಿಲ್ಲ. ಈಗಲಾದರೂ ರಾಜ್ಯ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಕಾಂಗ್ರೆಸ್ ಈಗ ಎಲ್ಲ ಕಡೆ ಗ್ಯಾರಂಟಿ ಕಾರ್ಡ್‌ಗಳನ್ನು ಬಳಸಿ ಪ್ರಚಾರ ಮಾಡುತ್ತಿದೆ. ಈ ಗ್ಯಾರಂಟಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅನುಷ್ಠಾನಕ್ಕೆ ಸಂಪನ್ಮೂಲ ಎಲ್ಲಿ ಹುಡುಕುತ್ತಾರೆ ಎಂಬುದು ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿದ್ದು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ನ ಗೆಲುವು ರಾಷ್ಟ್ರ ಮಟ್ಟದ ಕಾಂಗ್ರೆಸ್‌ಗೆ ಒಂದು ಟಾನಿಕ್ ಸಿಕ್ಕಂತಾಗಿದೆ. ರಾಷ್ಟ್ರಮಟ್ಟದ ಕಾಂಗ್ರೆಸ್ ಈಗ ಐಎನ್ಸಿ ಕಾಂಗ್ರೆಸ್ ಅಲ್ಲ, ಈಗ ಅದು ಇಂಡಿಯನ್ ನ್ಯಾಷನಲ್ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಆಗಿದೆ. ಅದನ್ನು ಅವರು ಎಲ್ಲೆಡೆ ಪ್ಲೇ ಮಾಡುತ್ತಿದ್ದಾರೆ ಎಂದರು.
ನಾವು ಎಡವಿದ್ದೆಲ್ಲಿ?. ಏನು? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ರಾಷ್ಟ್ರೀಯ ಪಕ್ಷ ಕರ್ನಾಟಕದಲ್ಲಿ, ಸೌತ್ ಇಂಡಿಯಾ ಗೇಟ್ನಲ್ಲಿ ಕುಸಿದು ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಿದೆ. ವಿರೋಧಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಸೋಲಿನ ಹೊಣೆ ಹೊತ್ತ ನಾಯಕರ ಬದಲಾವಣೆಯಾಗಿಲ್ಲ. ಅದರ ಬಗ್ಗೆ ಚಿಂತೆಯೂ ಇಲ್ಲ. ಈಗ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.