ಕರ್ನಾಟಕ

karnataka

ETV Bharat / state

ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಹಿಡಿಯುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ - ಈಟಿವಿ ಭಾರತ್ ಕನ್ನಡ ಸುದ್ದಿ

ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಪರಮಪೂಜ್ಯ ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವ
ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವ

By ETV Bharat Karnataka Team

Published : Aug 29, 2023, 3:31 PM IST

ಮೈಸೂರು : ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು. ಈ ಕಾರಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮಿಕ ಸಂಸ್ಕಾರದಲ್ಲಿ ಸುತ್ತೂರು ಮಠ ಹೆಮ್ಮರವಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.‌

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 108ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ

ಗ್ರಾಮೀಣ ಭಾಗದ ಬಡವರು ಮತ್ತು ಅಶಕ್ತರಿಗೆ ಶಿಕ್ಷಣ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಬೆಳೆಸಿದೆ. ಚಾತುವರ್ಣದ ಕಾರಣದಿಂದ ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಸುತ್ತೂರು ಮಠ ಅನ್ನ ಮತ್ತು ಶಿಕ್ಷಣ ದಾಸೋಹದ ಮೂಲಕ ಅಳಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣದ ಮೂಲಕ ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿಸುವ, ಉತ್ತಮ ಪ್ರಜೆಯನ್ನಾಗಿಸುವ ಮಹಾನ್ ಕಾರ್ಯವನ್ನು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ತಪಸ್ಸಿನಂತೆ ಮಾಡಿದರು ಎಂದು ತಿಳಿಸಿದರು.

ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತಿ

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕೂಡ ನೂರಕ್ಕೆ 78 ಮಂದಿಗೆ ಮಾತ್ರ ಅಕ್ಷರ ಕಲಿಕೆ ಸಾಧ್ಯವಾಗಿದೆ. ಉಳಿದವರಿಗೆ ಇನ್ನೂ ಸಿಕ್ಕಿಲ್ಲ. ವೈಜ್ಞಾನಿಕ-ವೈಚಾರಿಕ ಶಿಕ್ಷಣ ಸಿಗದೇ ಹೋದರೆ ಸಮಾಜಕ್ಕೆ ಜಡತ್ವ ಹಿಡಿಯುತ್ತದೆ. ಕುವೆಂಪು ಅವರ ಆಶಯದ ವಿಶ್ವ ಮಾನವ ಪ್ರಜ್ಞೆ ವಿಸ್ತರಿಸಿದಾಗ ಮಾತ್ರ ಸಮಾಜಕ್ಕೆ ಚಲನಶೀಲತೆ ಬರುತ್ತದೆ ಎಂದರು.

ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರದ್ದು ಸಾರ್ಥಕ ಬದುಕು. ಅಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಆರೋಗ್ಯಕರವಾಗಿ ಸಮಾಜವನ್ನು ತಿದ್ದಿದ, ಮುನ್ನಡೆಸಿದ ಸಾರ್ಥಕ ಬದುಕು ಅವರದ್ದಾಗಿದೆ. 12 ನೇ ಶತಮಾನದಲ್ಲೇ ಬಸವಾದಿ ಶರಣರು "ಇವ ನಮ್ಮವ" ಎನ್ನುವ ಮಂತ್ರದ ಮೂಲಕ ಸಮಾಜದ ಅಸಮಾನತೆಗೆ ಮದ್ದು ಕೊಟ್ಟರು. ಸಂವಿಧಾನದ ಪ್ರಕಾರ ಸಹಿಷ್ಣುತೆ, ಸಹಬಾಳ್ವೆ ಆಚರಣೆಗೆ ಬರಬೇಕಿದ್ದರೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ನೀಡುವ ಇಚ್ಛಾಶಕ್ತಿ ಬೇಕು. ಆ ಇಚ್ಛಾಶಕ್ತಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಇತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಬಸವಾದಿ ಶರಣರ ಆಶಯದಂತೆ ಅಶಕ್ತರಿಗೆ ಶಕ್ತಿ ತುಂಬುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿದ್ದೇವೆ ಎಂದರು.

ಬಸವಣ್ಣ, ಅಂಬೇಡ್ಕರ್, ಗಾಂಧಿ ಅವರ ಸಾಮಾಜಿಕ ನ್ಯಾಯದ ಆಶಯಗಳು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯ ಕಾಯಕದಲ್ಲಿವೆ. ನಮ್ಮ ಸರ್ಕಾರ ಕೂಡ ಈ ಎಲ್ಲರ ಕಾಯಕ ಶ್ರೇಷ್ಠ ಪ್ರಜ್ಞೆಯಿಂದ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ನಾನು ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರೂ ಒಟ್ಟಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದೆವು. ತಾಯಿ ನಮಗೆ ಕೊಟ್ಟ ಶಕ್ತಿಯನ್ನು ಗೃಹಲಕ್ಷ್ಮಿ ಕಾರ್ಯಕ್ರಮದ ಮೂಲಕ ಜನರಿಗೆ ನೀಡುತ್ತಿದ್ದೇವೆ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಸುತ್ತೂರು ಕ್ಷೇತ್ರ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಿದ್ಧಗಂಗಾ ಕ್ಷೇತ್ರದ ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು ಅವರು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ ಮಹದೇವಪ್ಪ ವಹಿಸಿದ್ದರು. ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ABOUT THE AUTHOR

...view details