ಮೈಸೂರು:ಮಾಜಿ ಸಿಎಂ ಸಿದ್ದರಾಮಯ್ಯನವರ ಪರಮಾಪ್ತ ಹಾಗೂ ಹಿರಿಯ ಸಮಾಜವಾದಿ ಪ.ಮಲ್ಲೇಶ್ (89) ಅವರು ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಗುರುವಾರ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ತಪಾಸಣೆ ಮಾಡಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಪ.ಮಲ್ಲೇಶ್ ಅವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಪತ್ನಿ ಸರ್ವಮಂಗಳ ಎರಡು ವರ್ಷ ಹಿಂದೆ ಮೃತಪಟ್ಟಿದ್ದರು. ಚಿತ್ರದುರ್ಗಕ್ಕೆ ಸೇರಿದ ಗುಡ್ಡದ ರಂಗಪ್ಪನಹಳ್ಳಿಯಲ್ಲಿ ಜನಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಪದವಿ ಪಡೆದಿದ್ದರು. ಬಳಿಕ ಮಾನಸ ಗಂಗೋತ್ರಿಯಲ್ಲಿ ಪ್ರಪ್ರಥಮ ಬ್ಯಾಚ್‌ನಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಕ್ಕಿಳಿದ ಪ.ಮಲ್ಲೇಶ್ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಚುನಾವಣೆಯಲ್ಲಿ ಸೋಲು:ಮಹಾತ್ಮ ಗಾಂಧಿ, ರಾಮಮನೋಹರ ಲೋಹಿಯಾ ಸಿದ್ಧಾಂತಕ್ಕೆ ಓಗೊಟ್ಟಿದ್ದ ಇವರು 1989ರ ಸಂಸತ್ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಸೋತಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎದುರು ಸೋಲು ಕಂಡಿದ್ದರು. ಮೈಸೂರು ಜಿಲ್ಲೆಯ ಚಾಮಲಾಪುರ ಉಷ್ಣಸ್ಥಾವರವನ್ನು ವಿರೋಧಿಸಿ ಹೋರಾಟ ಮಾಡಿ, ಅದಕ್ಕೆ ಶಾಶ್ವತ ತಡೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಸ್ನಾತಕೋತ್ತರ ಹಂತದವರೆಗೂ ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲೂ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು ಎಂಬುವುದು ಪ.ಮಲ್ಲೇಶ್ ಅವರ ಪ್ರತಿಪಾದನೆಯಾಗಿತ್ತು. ಇಂದಿಗೂ ಅವರು ಸ್ಥಾಪಿಸಿರುವ ನೃಪತುಂಗ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕನ್ನಡದಲ್ಲಿಯೇ ಪಾಠ ನಡೆಯುತ್ತಿರುವುದು ವಿಶೇಷವಾಗಿದೆ.
ಸಿದ್ದರಾಮಯ್ಯ ಸಂತಾಪ:ಹಿರಿಯ ಸಮಾಜವಾದಿ ಚಿಂತಕ, ಪ್ರಗತಿಪರ ಹೋರಾಟಗಾರ ಮತ್ತು ನನ್ನ ಬಹುಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಅವರ ಸಾವು ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟ. ಮಲ್ಲೇಶ್ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಶ್ರೇಷ್ಠ ಸಮಾಜವಾದಿಗಳಾದ ರಾಮ್ ಮನೋಹರ್ ಲೋಹಿಯಾ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ಮೌಲ್ಯ ಹಾಗೂ ಆದರ್ಶಗಳನ್ನು ಬಾರಿ ಗಟ್ಟಿಯಾಗಿ ನಂಬಿದ್ದ, ಹಳೆ ಮೈಸೂರು ಭಾಗದಲ್ಲಿ ವೈಚಾರಿಕತೆಯ ಹಿನ್ನೆಲೆ ಹಾಗೂ ಜಾತ್ಯತೀತ ನಿಲುವಿನ ಬಹಳಷ್ಟು ಹೋರಾಟಗಳಲ್ಲಿ ಸಾವಿನ ಕೊನೆಯ ದಿನಗಳ ತನಕ ಅದರ ನೇತೃತ್ವ ವಹಿಸಿದ ಹಿರಿಯ ಸಮಾಜವಾದಿ ಪ. ಮಲ್ಲೇಶ್ ಅವರ ನಿಧನಕ್ಕೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಗೌರವದ ಸಂತಾಪ ಸೂಚಿಸಿದೆ. 1998 ರಿಂದ 2022 ರವರೆಗೆ ವಿದ್ಯಾರ್ಥಿ ಚಳವಳಿ, ಇನ್ನಿತರ ಪ್ರಗತಿಪರ ಆಲೋಚನೆ ಮತ್ತು ಹೋರಾಟಕ್ಕೆ ನನಗೆ ಮಾರ್ಗದರ್ಶನ ನೀಡಿದ ಸೈದ್ಧಾಂತಿಕತೆಯ ಗುರು ಪ. ಮಲ್ಲೇಶ್ ಅವರು ಹೊಸ ತಲೆಮಾರಿನ ಯುವರಾಜಕಾರಣಿಗಳಿಗೆ ಒಂದು ದೊಡ್ಡ ಆದರ್ಶ ಎಂದು ಕಾಂಗ್ರೆಸ್ ಮುಖಂಡ ಡಾ.ಬಿ.ಜೆ.ವಿಜಯ್ ಕುಮಾರ್ ಕಂಬನಿ ಮಿಡಿದಿದ್ದಾರೆ.