ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಮತದಾರರಿಲ್ಲ, ಕೋಲಾರದಿಂದ ಸ್ಪರ್ಧೆ ಮಾಡಿದರೆ ನೂರಕ್ಕೆ ನೂರು ಅವರು ಗೆಲ್ಲುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದು ಬಹಳ ಸಂತೋಷ ಆಗ್ತಿದೆ. ಅವರಿಗೆ ಕೋಲಾರಕ್ಕೆ ಹೋಗ್ಬೇಡಿ ಎಂದು ಹೇಳಿದ್ದೇನೆ. ಒಂದು ವೇಳೆ ಎಲ್ಲರೂ ಸೇರಿ ನಿಮ್ಮನ್ನು ಬಲಿ ಕೊಡ್ತಾರೆ ಎಂದು ಹೇಳಿದ್ದೆ, ಈಗ ಅವರಿಗೆ ಕೋಲಾರದಲ್ಲಿ ಮತದಾರರು ಇಲ್ಲ, ಮುಸ್ಲಿಂ ಅವರು ಶೇ.90ರಷ್ಟು ಈಗಾಗಲೇ ನಮ್ಮ ಪಕ್ಷಕ್ಕೆ ಬಂದಾಗಿದೆ.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನೂರಕ್ಕೇ ನೂರು ಗೆಲ್ಲಲ್ಲ. ಅವರು ಸಿಎಂ ಆಗಿದ್ದಾಗ ಜಿಟಿ ಎದುರಿಗೇ ಗೆಲ್ಲಲಾಗಲಿಲ್ಲ. ಈ ಬಾರಿ ವರುಣಾದಲ್ಲೇ ಸ್ಪರ್ಧೆ ಮಾಡಿ ಗೆಲ್ಲಲಿ ಸಾಕು ಎಂದು ಹೇಳಿದರು.
ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ಇಬ್ರಾಹಿಂ: ಟಿಪ್ಪು ಒಬ್ಬ ಹುತಾತ್ಮ. ನಮ್ಮ ನಾಡಿನ ಹೋರಾಟಗಾರ. ಟಿಪ್ಪು ಸಮಾಧಿ ಬಳಿ ಇಂದಿಗೂ ಸಾವಿರಾರು ಜನ ಬರುತ್ತಾರೆ. ರಾಜಕೀಯಕ್ಕಾಗಿ ಟಿಪ್ಪು ಹೆಸರು ಬಳಕೆ ಸರಿಯಲ್ಲ. ಪ್ರತಾಪ್ ಸಿಂಹ ನೀನೊಬ್ಬ ಪತ್ರಕರ್ತ, ಸಂಸದ ಬೇರೆ ಆಗಿದ್ದೀಯಾ. ಶತ್ರು ಮನೆಗೆ ಬಂದ್ರು ದೈವ ಭಾವದಿಂದ ನೋಡ್ಬೇಕು. ಓಟಿಗಾಗಿ ಚಿಲ್ಲರೆ ಕೆಲಸ ಮಾಡಬೇಡ. ಪ್ಯಾಲೆಸ್ ಮೇಲೂ ಗುಂಬಜ್ ಇದೆ ಅದನ್ನು ಒಡೆಯಿರಿ ನೋಡೋಣ ಎಂದು ಸವಾಲು ಹಾಕಿದರು.
ನಂಜನಗೂಡಿಗೆ ಟಿಪ್ಪು ವಜ್ರಾಭರಣ ಕೊಟ್ಟಿದ್ದಾರೆ. ಟಿಪ್ಪು ಬೇಡ ಅಂದರೆ ವಜ್ರ ವಾಪಸ್ ಕೊಡೋ ಪ್ರತಾಪ. ಶೃಂಗೇರಿಯಲ್ಲಿ ಟಿಪ್ಪು ಆರತಿ ಮಾಡ್ತಾರೆ. ಅದೆಲ್ಲಾ ಟಿಪ್ಪು ಮೇಲಿನ ಅಭಿಮಾನಕ್ಕಾಗಿ, ಗೌರವದಿಂದ ಮಾಡ್ತಾರೆ. ನೀನಿನ್ನು ಚಿಕ್ಕ ಹುಡುಗ. ಇನ್ನಾದರೂ ದೇವರು ಇವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ಸಿ ಎಂ ಇಬ್ರಾಹಿಂ ತಿರುಗೇಟು ನೀಡಿದರು.
ಮೈಸೂರಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲ್ಲ: ನಮ್ಮಲ್ಲಿ ಪ್ರತಿಮೆ, ಫೋಟೋ ಸಂಸ್ಕೃತಿ ಇಲ್ಲ ಎನ್ನುವುದು ಪಾಪ ತನ್ವೀರ್ ಸೇಠ್ ಗೆ ಗೊತ್ತಿಲ್ಲ. ನಾವು ಪ್ರತಿಮೆ ಮಾಡಲ್ಲ. ಮೈಸೂರಲ್ಲಿ ಅಥವಾ ಕೋಲಾರದಲ್ಲಿ ಅವರ ಹೆಸರಿಗೆ ತಕ್ಕಂತೆ ಯೂನಿವರ್ಸಿಟಿ ಮಾಡುತ್ತೇವೆ. ಪ್ರತಿಮೆ ಮಾಡುವ ವಿಚಾರ ನಮ್ಮ ಮುಸಲ್ಮಾನ ಧರ್ಮದಲ್ಲಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಗೆ ಸಿಎಂ ಇಬ್ರಾಹಿಂ ಟಾಂಗ್ ಕೊಟ್ಟರು.
ಇದನ್ನೂ ಓದಿ :ಮುಂದಿನ ಚುನಾವಣೆಯಲ್ಲೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು.. ಹೇಗಿದೆ ಲೆಕ್ಕಾಚಾರ?