ಮೈಸೂರು: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ನಿನ್ನೆ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸೇರಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಳೀಯ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ 12 ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದು, ಅದರಲ್ಲಿ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಅನೇಕ ಮಂದಿ ನಾಯಕರಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲ್ಲುವ ಸಾಧ್ಯತೆಗಳಿವೆ ಎಂಬ ಕುರಿತು ಚರ್ಚೆ ಮಾಡುವ ಮೂಲಕ ದೆಹಲಿಯಲ್ಲಿ ನಡೆಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ, ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದನ್ನು ಫೈನಲ್ ಮಾಡುವ ಹಿನ್ನೆಲೆಯಲ್ಲಿ ಈ ಮೀಟಿಂಗ್ ನಡೆದಿದೆ ಎನ್ನಲಾಗಿದೆ.
ಜಿ.ಟಿ.ದೇವೇಗೌಡರನ್ನು ಸೋಲಿಸಲು ಒಗ್ಗಟ್ಟಿನ ಮಂತ್ರ :ಕಳೆದ ಬಾರಿ ತಮ್ಮ ಸೋಲನ್ನು ಸವಾಲಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾದರೆ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಅಭಿಪ್ರಾಯವನ್ನ ಪಡೆದುಕೊಳ್ಳುತ್ತಿದ್ದಾರೆ. ಈಗಾಗಾಲೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಹಾಗೂ ಆಪ್ತರಾದ ಮರೀಗೌಡ, ಮಾವಿನಹಳ್ಳಿ ಸಿದ್ದೇಗೌಡ, ಕೂರ್ಗಳ್ಳಿ ಮಹದೇವ್ ಸೇರಿದಂತೆ ಹಲವು ಮುಖಂಡರ ಜೊತೆ ಮಾತುಕತೆ ನಡೆಸಿದರು.
ಇದನ್ನೂ ಓದಿ:ಜನರಿಗೆ ಗ್ಯಾರಂಟಿ ಕಾರ್ಡ್ ಮುಟ್ಟಿಸಲು ವಿಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆಶಿ ಕರೆ