ಕರ್ನಾಟಕ

karnataka

ETV Bharat / state

ಅ. 17 ರಿಂದ ಅರಮನೆಯಲ್ಲಿ ಶರನ್ನವರಾತ್ರಿ ಆರಂಭ..

ಈ ಬಾರಿಯ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಸರಳ ದಸರಾ ಸಿದ್ಧತೆಗಳು ನಡೆಯುತ್ತಿವೆ.

mysore
ಮೈಸೂರು

By

Published : Oct 9, 2020, 12:46 PM IST

ಮೈಸೂರು: ಇದೇ ಅಕ್ಟೋಬರ್ 17ರಿಂದ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ದಸರಾ ಸಿದ್ಧತೆ
ಈಗಾಗಲೇ ಸಿಂಹಾಸನದ ಬಿಡಿ ಭಾಗಗಳನ್ನು ಜೋಡಣೆ ಮಾಡಿದ್ದು, ಅಕ್ಟೋಬರ್ 17ರಂದು ಬೆಳಗ್ಗೆ 6.15ರಿಂದ 6.30ರವರೆಗೆ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನಡೆಯಲಿದೆ. ನವರಾತ್ರಿಯ ಮೊದಲ ದಿನ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುವುದು. ಸಿಂಹದ ಮೇಲೆ ಆಸೀನಳಾಗಿರುವ ದುರ್ಗೆಯ ಸಾಮರ್ಥ್ಯದ ಸಂಕೇತವಾಗಿರುವಂತೆ ರಾಜರು ಸಿಂಹಾಸನದಲ್ಲಿ ಕೂರುತ್ತಿದ್ದುದೂ ಸಹ ಶಕ್ತಿಯ ಸಂಕೇತವಾಗಿತ್ತು. ಆದ್ದರಿಂದ ಸಿಂಹ ಇಲ್ಲದ ಆಸನವು ಶಕ್ತಿ ಕಳೆದುಕೊಂಡಂತೆ. ಅಂದು ಬೆಳಗ್ಗೆ 7.45ರಿಂದ 8.15ರವರೆಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಪಟ್ಟದ ಆನೆ, ಕುದುರೆ ಮತ್ತು ಪಟ್ಟದ ಹಸುವನ್ನು ಸವಾರ ತೊಟ್ಟಿಗೆ ಕರೆತಂದು ಕಳಸ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.
ನಾನಾ ಧಾರ್ಮಿಕ ಕಾರ್ಯಕ್ರಮಗಳು:
  • ಅಕ್ಟೋಬರ್ 21ರಂದು ಬೆಳಗ್ಗೆ 9.45 ಗಂಟೆಗೆ ಸರಸ್ವತಿ ಪೂಜೆ.
  • ಅಕ್ಟೋಬರ್ 23ರಂದು ಬೆಳಗ್ಗೆ 9.45ಕ್ಕೆ ಕನ್ನಡಿ ತೊಟ್ಟಿಯಲ್ಲಿ ಕಲಾರತಿ ನಡೆಯಲಿದ್ದು, ಸಂಜೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸುತ್ತಾರೆ.
  • ಅಕ್ಟೋಬರ್ 25ರಂದು ಪಟ್ಟದ ಆನೆ, ಕುದುರೆ ಮತ್ತು ಹಸು, ಆನೆ ಬಾಗಿಲಿಗೆ ಬೆಳಗ್ಗೆ 6 ಗಂಟೆಗೆ ಬರಲಿದ್ದು, ಬೆಳಗ್ಗೆ 6.15ಕ್ಕೆ ಚಂಡಿ ಹೋಮ ನಡೆಯುತ್ತದೆ. ಬೆಳಗ್ಗೆ 6.28ಕ್ಕೆ ಆನೆ ಬಾಗಿಲಿನಿಂದ ಖಾಸಾ ಆಯುಧಗಳನ್ನು ಶ್ರೀ ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ತರಲಾಗುವುದು. ಪೂಜೆ ನಂತರ ಕಲ್ಯಾಣ ಮಂಟಪಕ್ಕೆ ತರಲಾಗುವುದು. ಬೆಳಗ್ಗೆ 10 ಗಂಟೆಗೆ ಆಯುಧ ಪೂಜೆ ನಡೆಯಲಿದ್ದು, ಅಂದು ಸಹ ಸಂಜೆ ಖಾಸಗಿ ದರ್ಬಾರ್ ನಡೆಯುತ್ತದೆ.
  • ಅಕ್ಟೋಬರ್ 26ರ ವಿಜಯದಶಮಿ ದಿನದಂದು ಖಾಸಾ ಆಯುಧಗಳಿಗೆ ಉತ್ತರ ಪೂಜೆ ನಡೆಸಿ ನಂತರ ಭುವನೇಶ್ವರಿ ದೇವಸ್ಥಾನಕ್ಕೆ ಕಳುಹಿಸಲಾಗುವುದು.

ಒಟ್ಟಾರೆ ಈ ಬಾರಿಯ ಸರಳ ಮತ್ತು ಸಾಂಪ್ರದಾಯಿಕ ದಸರಾ ಅರಮನೆಗೆ ಸೀಮಿತವಾಗಿದ್ದು, ಸರಳವಾದರೂ ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ.

ABOUT THE AUTHOR

...view details