ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿ, ಗುಂಡು ಹಾರಿಸಿ, ಗ್ರಾಮಸ್ಥರಿಗೆ ಭಯ ಹುಟ್ಟುಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಬಿಲ್ಲಹಳ್ಳಿ ಗ್ರಾಮದಲ್ಲಿ ಗುರುಲಿಂಗಪ್ಪ ಕುಟುಂಬ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಮನೆಯ ಗಲ್ಲಿ ವಿಚಾರದಲ್ಲಿ ಗಲಾಟೆ ನಡೆದು ಗ್ರಾಮದಲ್ಲಿ ನ್ಯಾಯ ಪಂಚಾಯತ್ ನಡೆದು ಸಮಸ್ಯೆ ಬಗೆಹರಿಯದೆ ನ್ಯಾಯಾಲಯದಲ್ಲಿ ಪ್ರಕರಣವಿದೆ.
ಈ ನಡುವೆ ಚನ್ನಬಸವಪ್ಪ ಮತ್ತು ಅವರ ಮೊಮ್ಮಗಳ ಗಂಡ ಸುನಿಲ್‌ಕುಮಾರ್ ತನ್ನ ಸ್ನೇಹಿತರನ್ನು ಗ್ರಾಮಕ್ಕೆ ಕರೆತಂದು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಈತನೊಂದಿಗೆ ಬಂದಿದ್ದ ಕರ್ನಾಟಕ ಚಳವಳಿ ವೇದಿಕೆ ಅಧ್ಯಕ್ಷ ಬೆಂಗಳೂರು ಮೂಲದ ಎಂ.ಮಧುಗೌಡ ಮತ್ತು ಈತನ ಸಹಚರರು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆಗೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಬೆದರಿಸಲು ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಅವರು ಬಂದಿದ್ದ ವಾಹನಗಳನ್ನು ತಡೆದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು 7 ಮಂದಿಯನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಿಲ್ಲಹಳ್ಳಿ ಗ್ರಾಮದ ಬಿ.ಎಂ. ಚನ್ನಬಸಪ್ಪ, ಈತನ ಮೊಮ್ಮಗಳ ಗಂಡ ಬಿ.ಎನ್. ಸುನಿಲ್‌ಕುಮಾರ್, ಖಾಸಗಿ ಕನ್ನಡ ನ್ಯೂಸ್ ಚಾನಲ್‌ನ ಮಾಲೀಕ ಮತ್ತು ಕನ್ನಡ ಚಳವಳಿ ವೇದಿಕೆ ರಾಜ್ಯಾಧ್ಯಕ್ಷ ಬೆಂಗಳೂರು ಗ್ರಾಮದ ಎಂ.ಮಧುಗೌಡ, ಬೆಂಗಳೂರಿನವರಾದ ಯಾಸೀನ್, ಎಂ.ಪುನೀತ್‌ಕುಮಾರ್, ಸಚಿನ್, ಬಿ.ಡಿ.ಪುನೀತ ಸೇರ 7 ಮಂದಿಯನ್ನು ಬಂಧಿಸಿದ್ದಾರೆ. ಇವರೊಂದಿಗೆ ಬಂದಿದ್ದ ಗನ್‌ಮ್ಯಾನ್ ಮತ್ತು ಇತರರು ಪರಾರಿಯಾಗಿದ್ದಾರೆ.